ದಾವಣಗೆರೆ: ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ನಾಯಕತ್ವ ಗೊಂದಲ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಹೆಚ್. ಆಂಜನೇಯ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುವುದು ಕಾಂಗ್ರೆಸ್ ಸಂಪ್ರದಾಯ. ಮುಖ್ಯಮಂತ್ರಿಯಾರಾಗಬೇಕು ಎಂಬುದಕ್ಕೆ ಪಕ್ಷದ ಹೈಕಮಾಂಡ್ ನಿರ್ಧಾರವೇ ಎಲ್ಲರ ಅಭಿಪ್ರಾಯವಾಗಿದೆ ಎಂದರು.
ಮುಂದಿನ ಅವಧಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹೀಗಾಗಿಯೇ ಬೇರೆ ಬೇರೆ ಪಕ್ಷದ ಶಾಸಕರು, ಅಽಕಾರಿಗಳು ನಮಗೆ ಈಗೀಗ ತುಂಬ ಚೆನ್ನಾಗಿ ಮಾತನಾಡಿಸುತ್ತಿದ್ದಾರೆ ಎಂದರು.
ಸಮಾಜಕಲ್ಯಾಣ ಸಚಿವರ ಆಪ್ತಸಹಾಯಕ ಜನರಿಂದ ಹಣ ಪಡೆದಿರುವ ಪ್ರಕರಣ ಸಮಗ್ರ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಚಿವರ ಹೆಸರಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ನಿಲ್ಲಲು ಇದು ಎಚ್ಚರಿಕೆ ಗಂಟೆಯಾಗಬೇಕು ಎಂದರು.
ಇದನ್ನೂ ಓದಿ : 6 ಕೋಟಿ ವರ್ಷ ಹಳೆಯ ಬೃಹತ್ ಲಾವಾಶಿಲೆ ಪತ್ತೆ : ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಪತ್ತೆ
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಡವರಿಗೆ ಸರ್ಕಾರ 10 ಸಾವಿರ ರೂ. ಪರಿಹಾರ ನೀಡಬಹುದಿತ್ತು. ಆದರೆ, ಸರ್ಕಾರಕ್ಕೆ ಬಡವರ ಬಗ್ಗೆ ಕಿಂಚಿತ್ತೂ ಕನಿಕರ ಇಲ್ಲ. ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.