ಚಿಕ್ಕಮಗಳೂರು: ಕಾಂಗ್ರೆಸ್ ನಾಯಕಿ, ಮಾಜಿ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ನಿವಾಸ, ಕಚೇರಿ ಬೇಲೂರು ರಸ್ತೆಯಲ್ಲಿರುವ ಅಳಿಯನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮದುವೆ ದಿಬ್ಬಣದ ಪೋಸ್ಟ್ ಹಾಕಿಕೊಂಡು ಬಂದ ಅಧಿಕಾರಿಗಳು: ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಮನೆಯಲ್ಲಿ ವಾಸವಿರುವ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮದುವೆ ದಿಬ್ಬಣದ ಸೋಗಿನಲ್ಲಿ ಬಂದಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಕಾರಿನ ಮುಂಭಾಗದಲ್ಲಿ ಮದುವೆಯ ಬೋರ್ಡ್ ಹಾಕಿದ್ದು, ಅಭಿನವ್ ವೆಡ್ಸ್ ದೀಪಿಕಾ ಎಂದು ಬೋರ್ಡ್ ಹಾಕಲಾಗಿದೆ.
ಇದನ್ನೂ ಓದಿ:ಕುಷ್ಟಗಿ: ಕಡಲೆ ಬೆಳೆಗೆ ಹಸಿರು ಕೀಟ ಬಾಧೆ; ಸಿಂಪಡಣೆಗೆ ಔಷಧಿ ಸಿಗದೆ ರೈತರು ಕಂಗಾಲು
ಸಿ.ಟಿ.ರವಿ ಹುನ್ನಾರ ಕಾಂಗ್ರೆಸ್ ಆರೋಪ: ಮಾಜಿ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ಮುಂಬರುವ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಹುತೇಕ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹುನ್ನಾರ ನಡೆಸಿ ಚುನಾವಣೆ ಹೊಸ್ತಿಲಲ್ಲಿ ಆದಾಯ ಇಲಾಖೆ ಅಧಿಕಾರಿಗಳಿಂದ ದಾಳಿ ಮಾಡಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.