ನವದೆಹಲಿ:ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರ ಮಾಜಿ ಸಚಿವ ಬೂಟಾ ಸಿಂಗ್ (86ವರ್ಷ) ಶನಿವಾರ (ಜನವರಿ 02) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಿಂಗ್ ಗೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಮೆದುಳು ರಕ್ತಸ್ರಾವ(ಬ್ರೈನ್ ಹ್ಯಾಮರೇಜ್)ಕ್ಕೆ ಒಳಗಾದ ನಂತರ ಕೋಮಾದಲ್ಲಿದ್ದರು ಎಂದು ವರದಿ ತಿಳಿಸಿದೆ.
“ನನ್ನ ತಂದೆ ಬೂಟಾ ಸಿಂಗ್ ಇಂದು ಬೆಳಗ್ಗೆ ನಿಧನರಾಗಿದ್ದು, ಅವರ ಆತ್ಮಕ್ಕೆ ದೇವರು ಸದ್ಗತಿ” ನೀಡಲಿ ಎಂದು ಪುತ್ರ ಅರವಿಂದರ್ ಸಿಂಗ್ ಲವ್ಲಿ ಸಿಧು ಹಿಂದಿಯಲ್ಲಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದಾಗಿ ವರದಿ ಹೇಳಿದೆ.
1934ರಲ್ಲಿ ಪಂಜಾಬ್ ನ ಜಲಂಧರ್ ನಲ್ಲಿ ಬೂಟಾ ಸಿಂಗ್ ಜನಿಸಿದ್ದರು. ಬೂಟಾ ಸಿಂಗ್ ಅವರು ಜವಾಹರಲಾಲ್ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಸಿಂಗ್ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಗೆ ನಿಕಟವರ್ತಿಯಾಗಿದ್ದರು.
1962ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ರಾಜೀವ್ ಗಾಂಧಿ ಸರ್ಕಾರದಲ್ಲಿ 1986ರಿಂದ 1989ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು. ಹಿಂದುಳಿದ ಜಾತಿ ಆಯೋಗದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಪಶ್ಚಿಮಬಂಗಾಳ ಮತ್ತು ಬಿಹಾರದ ರಾಜ್ಯಪಾಲರಾಗಿದ್ದರು. ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
1960ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಬೂಟಾ ಸಿಂಗ್ ನಂತರ ಶಿರೋಮಣಿ ಅಕಾಲಿ ದಳದ ಸದಸ್ಯರಾಗಿದ್ದರು. ಬೂಟಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬೂಟಾ ಸಿಂಗ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್, ಅಮರೀಂದರ್ ಸಿಂಗ್ ಮತ್ತು ಕುಲದೀಪ್ ಬಿಷ್ಣೋಯಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.