Advertisement

ಸೆಮಿಫೈನಲ್‌ ಗೆಲ್ಲಲು ಕೈ-ದಳ ಕಾರ್ಯತಂತ್ರ

06:30 AM Oct 22, 2018 | Team Udayavani |

ಬೆಂಗಳೂರು: ಉಪ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌-ಜೆಡಿಎಸ್‌ ಅದರಲ್ಲೂ ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಶತಾಯ ಗತಾಯ ಗೆಲ್ಲಲು ಕಾರ್ಯತಂತ್ರ ರೂಪಿಸಿದೆ.

Advertisement

ಎರಡೂ ಕ್ಷೇತ್ರಗಳ ಕಳೆದೆರಡು ಲೋಕಸಭೆ ಚುನಾವಣೆ ಫ‌ಲಿತಾಂಶ ಆಧರಿಸಿ ಜಾತಿ ಹಾಗೂ ಸಮುದಾಯವಾರು ಮತಗಳ ಕ್ರೂಢೀಕರಣದ ಲೆಕ್ಕಾಚಾರದೊಂದಿಗೆ ಎರಡೂ ಪಕ್ಷದ ನಾಯಕರು “ಅಖಾಡ’ಗೆ ಇಳಿದಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬಿಜೆಪಿಯಿಂದ ಆ ಎರಡೂ ಕ್ಷೇತ್ರ ವಶಪಡಿಸಿಕೊಳ್ಳಲು ಕೈಗೊಳ್ಳಬೇಕಾದ ರಣತಂತ್ರದ ಬಗ್ಗೆ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಸಚಿವ ಡಿ.ಕೆ.ಶಿವಕುಮಾರ್‌ ಜತೆ ರಹಸ್ಯ ಮಾತುಕತೆ ನಡೆಸಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ನಂತರ  ಈ ನಾಯಕರು ಪ್ರತ್ಯೇಕವಾಗಿ ಸುಮಾರು ಒಂದು ಗಂಟೆ ಕಾಲ ಚರ್ಚಿಸಿದ್ದು, ಬಿಜೆಪಿಯ ತಂತ್ರಕ್ಕೆ ಹೇಗೆ ಪ್ರತಿತಂತ್ರ ರೂಪಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಆರು ಶಾಸಕರನ್ನು ಹೊಂದಿರುವುದು. ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಸಹ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕ ಆಗಿರುವುದರಿಂದ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಪ್ರಚಾರ ಮಾಡಿ ಶ್ರಮ ಹಾಕಿದರೆ ಗೆಲುವು ಕಷ್ಟವಾಗಲಾರದು. ಎಸ್‌ಟಿ ಮತಗಳ ಜತೆಗೆ  ಎಸ್‌ಸಿ, ಮುಸ್ಲಿಂ ಹಾಗೂ ಲಿಂಗಾಯಿತ ಮತಗಳು ಆ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದರಿಂದ ಆ ಮತ ಚದುರದಂತೆ ನೋಡಿಕೊಳ್ಳಲು ತೀರ್ಮಾನಿಸಲಾಗಿದೆ.

Advertisement

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅಭ್ಯರ್ಥಿಯಾಗಿರುವುದರಿಂದ  ಈಡಿಗ ಸಮುದಾಯದ ಮತ ಕ್ರೂಢೀಕರಣವಾಗಬಹುದು. ಜತೆಗೆ ಒಕ್ಕಲಿಗ, ಮುಸ್ಲಿಂ, ದಲಿತ ಹಾಗೂ  ಇತರೆ ಹಿಂದುಳಿದ ಮತಗಳನ್ನು ಸೆಳೆದರೆ ಅಲ್ಲೂ ಗೆಲ್ಲಬಹುದು. ಆಯಾ ಸಮುದಾಯದ ನಾಯಕರಿಗೆ  ವಿಧಾನಸಭೆ ಕ್ಷೇತ್ರಾವಾರು ಹೊಣೆಗಾರಿಕೆ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಯಿತು.

ಎಸ್‌ಟಿ ಮತ ಸೆಳೆಯಲು ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ, ದಲಿತರ ಮತ ಸೆಳೆಯಲು ಎಚ್‌. ಆಂಜನೇಯ, ಎಚ್‌.ಸಿ.ಮಹದೇವಪ್ಪ, ಮುಸ್ಲಿಂ ಮತ ಸೆಳೆಯಲು ಸಿ.ಎಂ. ಇಬ್ರಾಹಿಂ, ಜಮೀರ್‌ಅಹಮದ್‌, ಯು,ಟಿ.ಖಾದರ್‌ ಅವರನ್ನೊಳಗೊಂಡ ತಂಡ ರಚಿಸುವ ಬಗ್ಗೆಯೂ ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ.ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಷ್ಟೇ ಅಲ್ಲದೆ ಜಮಖಂಡಿ, ಮಂಡ್ಯ, ರಾಮನಗರದಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳ ಪರ ಜಂಟಿ ಪ್ರಚಾರ ಮಾಡುವುದರಿಂದ ಸಂದೇಶ ರವಾನೆಯಾಗುತ್ತದೆ ಎಂದು ದೇವೇಗೌಡರು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಜಮಖಂಡಿಯಲ್ಲಿ ನೇರ ಪೈಪೋಟಿ ಇರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿ ಅಲ್ಲಿ ಅನುಕಂಪ ನೆಚ್ಚಿಕೊಂಡು ಕೂರಲು ಸಾಧ್ಯವಾಗದು. ಹೀಗಾಗಿ,  ಲಿಂಗಾಯಿತ, ಕುರುಬ ಸೇರಿ ಇತರೆ ಸಮುದಾಯದ ಮತ ಸೆಳೆಯಲು  ಎಲ್ಲ ನಾಯಕರು ಶ್ರಮ ಹಾಕಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.

ಇನ್ನು, ರಾಮನಗರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಯಾವುದೇ ಆತಂಕವಿಲ್ಲ. ಡಿ.ಕೆ.ಶಿವಕುಮಾರ್‌ ಮಧ್ಯಪ್ರವೇಶದಿಂದ  ಸ್ಥಳೀಯ ಕಾಂಗ್ರೆಸ್‌ ನಾಯಕರಲ್ಲಿದ್ದ ಅಸಮಾಧಾನ ನಿವಾರಣೆಯೂ ಆಗಿರುವುದರಿಂದ ಆ ಎರಡು ಕ್ಷೇತ್ರಗಳ ಮಟ್ಟಿಗೆ ನಿರಾಳ. ಆದರೂ ರಾಮನಗರ ಮತ್ತು ಮಂಡ್ಯದಲ್ಲೂ ಜಂಟಿ ಪ್ರಚಾರಕ್ಕೆ  ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಜತೆ ಸಿದ್ದರಾಮಯ್ಯ ಬರಲಿ ಎಂದು ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಯಾವುದೇ ಸಂಘರ್ಷವಿಲ್ಲದೆ ಮೈತ್ರಿಕೂಟದ ಅಭ್ಯರ್ಥಿಗಳ ಪರ ಕೆಲಸ ಮಾಡಲು ಸಮನ್ವಯ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರು ಹಾಗೂ ಸಂಸದರನ್ನು ಆ ಸಮಿತಿಗೆ ಸೇರಿಸಿದರೆ ಸ್ಥಳೀಯ ನಾಯಕರ ಜತೆ ಪ್ರಚಾರ ಕಾರ್ಯ ಸೇರಿದಂತೆ ಬೂತ್‌ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸಲು ಪರಸ್ಪರ ಚರ್ಚಿಸಿ ಮುನ್ನಡೆಯಲು ಇದು ಸಹಕಾರಯಾಗಲಿದೆ ಎಂಬ ಕಾರಣಕ್ಕೆ ಸಮನ್ವಯ ಸಮಿತಿ ರಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next