ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಎದುರಿಸಲಿದೆ. ಜಂಟಿ ಸಭೆ ನಡೆಸುತ್ತೇವೆ. ಸ್ಥಳೀಯ ನಾಯಕರು ವೈಮನಸ್ಸು ಬಿಟ್ಟು ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ನಮ್ಮ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಕೆ ಶಿವಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿದರು.
ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಟ್ಟಿಯನ್ನು ಒಟ್ಟಾಗಿ ರಿಲೀಸ್ ಮಾಡುತ್ತೇವೆ. ಮಾರ್ಚ್ 31ರಂದು ಸಂಜೆ ರಾಹುಲ್ ಗಾಂಧಿ ಹಾಗೂ ದೇವೇಗೌಡರು ಜಂಟಿಯಾಗಿ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸ್ಥಳೀಯ ಭಿನ್ನಾಭಿಪ್ರಾಯವನ್ನು ಈಗಾಗಲೇ ಕೆಲವು ಕಡೆ ಶಮನ ಮಾಡಿದ್ದೇವೆ. ಪ್ರತಿ ಜಿಲ್ಲೆಗೂ ಎರಡೂ ಪಕ್ಷಗಳಿಂದ ವೀಕ್ಷಕರನ್ನು ನೇಮಕ ಮಾಡುತ್ತೇವೆ. ಮೈಸೂರು,ಮಂಡ್ಯ ಬಿಕ್ಕಟ್ಟನ್ನು ನಾವು ಸರಿಪಡಿಸುತ್ತೇವೆ ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ದೇವೇಗೌಡ
ದೆಹಲಿಯಲ್ಲಿ ನನ್ನ ಅವಶ್ಯಕತೆಯ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಮಯವಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಹಾಸನ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದೆ. ಆದರೆ ನನಗೀಗ 87 ವರ್ಷ ಆಗಿದೆ. ಆ ನೆಲೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.