Advertisement

ಉಪ ಚುನಾವಣೆ: ಸ್ಪರ್ಧೆಗೆ ಹಿಂದೇಟು

06:00 AM Oct 11, 2018 | |

ಬೆಂಗಳೂರು: ನಾಲ್ಕು ತಿಂಗಳ ಅವಧಿಯ ಮೂರು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಅಗತ್ಯವೇ ಎಂಬ ಚರ್ಚೆಗಳ ನಡುವೆಯೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಅಭ್ಯರ್ಥಿಗಳೇ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಮೊದಲನೆಯದಾಗಿ ಚುನಾವಣೆ ವೆಚ್ಚದ ಬಗ್ಗೆ ಆತಂಕ, ಎರಡನೆಯದಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದರೂ-ಸೋತರೂ 2019ರ ಚುನಾವಣೆಯಲ್ಲಿ ಟಿಕೆಟ್‌ ಸಿಗುವ ಖಾತರಿ ಇಲ್ಲದಿರುವುದರಿಂದ ಸ್ಪರ್ಧೆ ಸಹವಾಸ ಬೇಡ ಎಂದು ಕೈ ಮುಗಿಯುತ್ತಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾಗಿದ್ದ ಲಕ್ಷ್ಮೀ ಅಶ್ವಿ‌ನಿಗೌಡ ಹಾಗೂ ಸಂತೋಷ್‌ ತಮ್ಮಣ್ಣ ಈಗ ಒಲ್ಲೆ ಎನ್ನುತ್ತಿದ್ದಾರೆ. ಅದೇ ರೀತಿ ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಪ್ರಸ್ತಾಪಗೊಂಡಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಸ್ಪರ್ಧೆಗೆ ಒಪ್ಪುತ್ತಿಲ್ಲ ಎಂದು ಹೇಳಲಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಡಿ ಮಂಡ್ಯ ಲೋಕಸಭೆ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡುವ ಪ್ರಸ್ತಾಪವಾಗಿದೆ. ಮಂಡ್ಯ ಕ್ಷೇತ್ರಕ್ಕೆ ಲಕ್ಷ್ಮಿ ಅಶ್ವಿ‌ನಿಗೌಡ , ಸಂತೋಷ್‌ ತಮ್ಮಣ್ಣ, ಶಿವರಾಮೇಗೌಡ ಅವರು ಆಕಾಂಕ್ಷಿಗಳಾಗಿದ್ದರು.  ಈಗ  ಲಕ್ಷ್ಮೀ ಅಶ್ವಿ‌ನಿಗೌಡ ನನಗೆ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ಸಚಿವ ಡಿ.ಸಿ.ತಮ್ಮಣ್ಣ ಅವರ ಪುತ್ರ ಸಂತೋಷ್‌ನನ್ನು ಕಣಕ್ಕೆ ಇಳಿಸಲು ಎಚ್‌.ಡಿ.ದೇವೇಗೌಡರು ಬಯಸಿದ್ದರು. ಆದರೆ, ತಮ್ಮಣ್ಣ ಅವರಿಗೆ ಪುತ್ರನನ್ನು ಕಣಕ್ಕಿಳಿಸಲು ಒಲವಿಲ್ಲ ಎಂದು ತಿಳಿದು ಬಂದಿದೆ. ಸಂತೋಷ್‌ ತಮ್ಮಣ್ಣ ಅವರ ಜತೆ ಮಾತನಾಡಿ ಸ್ಪರ್ಧೆಗೆ ಒಪ್ಪಿಸುವುದು ಇಲ್ಲವೇ ಶಿವರಾಮೇಗೌಡ ಅಥವಾ ಮಾಜಿ ಸಚಿವ ದಿವಂಗತ ಎಸ್‌.ಡಿ.ಜಯರಾಂ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.

ಕಿಮ್ಮನೆ ನಕಾರ
ಶಿವಮೊಗ್ಗ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದ ಕಿಮ್ಮನೆ ರತ್ನಾಕರ್‌ ಅವರು, ನಾನು ಚುನಾವಣೆಗೆ ಸ್ಪರ್ಧೆ ಮಾಡಲು ಆಕಾಂಕ್ಷಿಯೂ ಆಲ್ಲ, ಅಪೇಕ್ಷಿತನೂ ಅಲ್ಲ. ಚುನಾವಣೆ ವೆಚ್ಚ ಭರಿಸುವ ಶಕ್ತಿ ನನಗಿಲ್ಲ, ವಿಧಾನಸಭೆ ಚುನಾವಣೆಯಲ್ಲಾ ಖರ್ಚು ಇನ್ನೂ ಸುಧಾರಿಸಿಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಉಪ ಚುನಾವಣೆಯ ಅಗತ್ಯ ಹಾಗೂ ಔಚಿತ್ಯದ ಬಗ್ಗೆಯೇ ನಾನು ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದೇನೆ. ಹೀಗಿರುವಾಗ ನಾನು ಅಭ್ಯರ್ಥಿ ಆಗುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಂಜುನಾಥ ಭಂಡಾರಿ ಸಹ  ಈ ಬಾರಿ ಸ್ಪರ್ಧೆಗೆ ಆಸಕ್ತಿ ಹೊಂದಿಲ್ಲ. ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರು ನನಗೆ ಸ್ಪರ್ಧೆ ಮಾಡಲಾಗದು ಎಂದು ಹೇಳಿದ್ದಾರೆ.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಈ ಚುನಾವಣೆಗೆ ಸ್ಪರ್ಧಿಸುವುದಿಲ್ಲ. 2019 ರ ಲೋಕಸಭೆ ಚುನಾವಣೆಗೆ ಟಿಕೆಟ್‌ ನೀಡಿದರೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕಾಡಾ ಮಾಜಿ ಅಧ್ಯಕ್ಷ ಸುಂದರೇಶ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಅವರು ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಪಕ್ಷದ ನಾಯಕರು ಇನ್ನೂ ಗೊಂದಲದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿಯಲ್ಲಿ ಕೈ ಅಭ್ಯರ್ಥಿ ಕಗ್ಗಂಟು
ಬಳ್ಳಾರಿ ಲೋಕಸಭೆ ಉಪಚುನಾವಣೆಗಾಗಿ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರ ಕಾಂಗ್ರೆಸ್‌ಗೆ ಕಗ್ಗಂಟಾಗಿ ಪರಿಣಮಿಸಿದೆ. ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಸಹೋದರನಿಗೆ ಟಿಕೆಟ್‌ ಕೊಡುವುದು ಬೇಡ ಎಂಬುದು ಜಿಲ್ಲೆಯ ನಾಯಕರ ಆಗ್ರಹ. ಅಲ್ಲದೆ, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಗೆ ಅನಿಲ್‌ಲಾಡ್‌, ಸಂತೋಷ್‌ ಲಾಡ್‌ ಸಹೋದರರು ಹಾಗೂ ಶಾಸಕ ಆನಂದ್‌ಸಿಂಗ್‌, ಪಿ.ಟಿ.ಪರಮೇಶ್ವರ್‌ ನಾಯಕ್‌ ಗೈರಾಗಿದ್ದಾರೆ. ಇವರ ಅಭಿಪ್ರಾಯ ಪಡೆದು ಗುರುವಾರ ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಶಾಸಕ ತುಕಾರಾಂ ಅವರು ಸ್ಪರ್ಧೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇವರು ಗೆದ್ದಲ್ಲಿ ಮತ್ತೂಮ್ಮೆ ಉಪಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಕೈ ನಾಯಕರು ಹಿಂದೇಟು ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಮಧು ಸ್ಪರ್ಧೆ
ಇನ್ನು ವಿಜಯಪುರದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ದೇವೇಗೌಡರು, ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಶಾಸಕ ಮಧುಬಂಗಾರಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಸದ್ಯ ಅವರು ವಿದೇಶ ಪ್ರವಾಸದಲ್ಲಿದ್ದು, ಬಂದ ಬಳಿಕ ನಿರ್ಧಾರ ಮಾಡುತ್ತೇವೆ. ಒಂದು ವೇಳೆ ಅವರು ಒಪ್ಪದಿದ್ದರೆ ಕಾಂಗ್ರೆಸ್‌ ವರಿಷ್ಠರೊಂದಿಗೆ ಚರ್ಚಿಸಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಬಳ್ಳಾರಿಯನ್ನು ಕಾಂಗ್ರೆಸ್‌ಗೆ ಬಿಡಲಾಗಿದೆ ಎಂದಿದ್ದಾರೆ.

ಜಮಖಂಡಿಯಲ್ಲಿ ನಿರಾಣಿ ಸಹೋದರ ಸ್ಪರ್ಧೆ ಇಲ್ಲ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಮುರುಗೇಶ್‌ ನಿರಾಣಿ ಸಹೋದರ ಸಂಗಮೇಶ್‌ ನಿರಾಣಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಬಿಜೆಪಿಯಿಂದ ಕೇವಲ ಶ್ರೀಕಾಂತ್‌ ಕುಲಕರ್ಣಿ ಅವರಷ್ಟೇ ಸ್ಪರ್ಧಿಸುವುದು ಪಕ್ಕಾ ಆಗಿದೆ. ಸಂಗಮೇಶ್‌ ನಿರಾಣಿ ಅವರು ಪಕ್ಷೇತರನಾಗಿ ಸ್ಪರ್ಧಿಸಿದ್ದರಿಂದಲೇ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್‌ ಕುಲಕರ್ಣಿ ಸೋತಿದ್ದರು. ಆದರೆ ಈಗ ಪಕ್ಷದ ಒಡಕಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next