Advertisement

ಅಸ್ತಿತ್ವಕ್ಕಾಗಿ ಕಾಂಗ್ರೆಸ್‌, ಜೆಡಿಎಸ್‌ ಹೋರಾಟ

11:27 PM Nov 23, 2019 | Lakshmi GovindaRaj |

ಬೆಂಗಳೂರು: ಉಪ ಚುನಾವಣೆ ಕಾವೇರುತ್ತಿದ್ದಂತೆ ಅಸ್ತಿತ್ವ ಕಳೆದುಕೊಳ್ಳುವ ಪಕ್ಷಗಳು ತಮ್ಮ ನೈತಿಕತೆ, ಸಿದ್ಧಾಂತವನ್ನೆಲ್ಲ ಬಿಟ್ಟು ಒಳಗೊಳಗೆ ಚಟುವಟಿಕೆ ಚುರುಕುಗೊಳಿಸಿ, ಗೌರವ ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದು, ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ. ಏನೇ ಕಸರತ್ತು ನಡೆಸಿದರೂ 15 ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲ್ಲಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಗೆಲ್ಲಲಾಗದವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದೆಡೆ ಎಚ್‌ಡಿಕೆ, ಮತ್ತೂಂದೆಡೆ ಸಿದ್ದರಾಮಯ್ಯ ಅವರು ತಮ್ಮ ಪಕ್ಷಗಳನ್ನು ಮುಕ್ತಾಯ ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಿದ್ದು, ಅವರಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತೇನೆ ಎಂದು ವ್ಯಂಗ್ಯವಾಡಿದರು.

ಕೆ.ಆರ್‌. ಪೇಟೆಯಲ್ಲಿ ಗೂಂಡಾಗಿರಿ ಪ್ರವೃತ್ತಿ ತೋರುತ್ತಿದ್ದರೆ, ಹೊಸಕೋಟೆಯಲ್ಲಿ ತಮ್ಮ ಅಸ್ತಿತ್ವಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಅಲ್ಲೋಲ, ಕಲ್ಲೋಲ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಎರಡು ಕಾರಣವಿದೆ. ಒಂದೆಡೆ ಜೆಡಿಎಸ್‌ ಸಂಘಟನೆ ಸಂಪೂರ್ಣ ಕುಸಿದಿದ್ದು, ಕೇವಲ ಒಂದು ಮನೆಗೆ ಸೀಮಿತವಾಗಿರುವುದರಿಂದ, ತನ್ನ ಬದ್ಧ ವಿರೋಧಿಯೊಂದಿಗೆ ಕೈಜೋಡಿಸುವ ಪ್ರಯತ್ನದಲ್ಲಿದೆ.

ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಸಂಘಟಿತ ಕೆಲಸ ಮಾಡುವುದನ್ನು ಬಿಟ್ಟು ಏಕಾಂಗಿಯಾಗಿ ಕೆಲಸ ಮಾಡುವ ಸ್ಥಿತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಲುಪಿದ್ದಾರೆಂದು ವಾಗ್ಧಾಳಿ ನಡೆಸಿದರು. ಕೆ.ಆರ್‌.ಪುರ, ಯಶವಂತಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಂಘಟಿತರಾಗಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ ಉಪಚುನಾವಣೆ ಒನ್‌ ಸೈಡೆಡ್‌ ಆಗಿದ್ದು, ಎದುರಾಳಿಯೇ ಇಲ್ಲದಂತಾಗಿದೆ.

ಇದರಿಂದ ಕಂಗಾಲಾಗಿರುವ ಕಾಂಗ್ರೆಸ್‌, ಜೆಡಿಎಸ್‌ ಗೊಂದಲ ಮೂಡಿಸುತ್ತಿವೆ. ಉಪಚುನಾವಣೆ ನಡೆದಿರುವ ಕ್ಷೇತ್ರಗಳಿಗೆ ಬೇರೆ ಕಡೆಯಿಂದ ಜನರನ್ನು ಕರೆತಂದು ಗಲಾಟೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಹೀಗಾಗಿ ಚುನಾವಣೆ ಆಯೋಗ ಉಪಚುನಾವಣೆಯನ್ನು ಶಿಸ್ತು ಬದ್ಧವಾಗಿ ನಡೆಸಲು ವ್ಯವಸ್ಥೆ ಮಾಡಬೇಕು. ಕೆ.ಆರ್‌.ಪೇಟೆ, ಹೊಸಕೋಟೆ ಕ್ಷೇತ್ರವನ್ನು ಸೂಕ್ಷ್ಮವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

Advertisement

ಸದ್ಯಕ್ಕೆ ಅಗತ್ಯವಿಲ್ಲ!: ಮತ್ತಷ್ಟು ಜೆಡಿಎಸ್‌ ಶಾಸಕರು ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸದಾನಂದಗೌಡ, ನಮಗೆ ಸದ್ಯಕ್ಕೆ ಅಗತ್ಯವಿಲ್ಲ. ವಿಧಾನ ಸಭೆಯಲ್ಲಿ 106 ಸಂಖ್ಯಾ ಬಲವಿದೆ. 15 ಸ್ಥಾನ ಗೆದ್ದರೆ 121 ಸ್ಥಾನಕ್ಕೇರಲಿದೆ. ನಮ್ಮ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಬರಬಹುದು ಎಂದರು. ಸಿದ್ಧಾಂತ ಒಪ್ಪಿ ಬರುವುದು ಎಂದರೇನು ಎಂಬ ಪ್ರಶ್ನೆಗೆ, ಇದು ಭಾರೀ ಕ್ಲಿಷ್ಟ ಪ್ರಶ್ನೆ. ಉತ್ತರ ಕೊಡುವುದು ಅಷ್ಟು ಸುಲಭ ವಲ್ಲ. ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದರು.

ಸಿದ್ದುಗೆ ಮರೆತು ಹೋಗಿದೆ: ಸಿದ್ದರಾಮಯ್ಯ ಅವರು ತಾನು ಹಳ್ಳಿಯಿಂದ ಬಂದೆ. ಕುರಿ ಕಾದೆ, ಮತ್ತೂಂದು ಕಾದೆ ಎಂದು ಹೇಳುತ್ತಾರೆ. ಈಗ ದೊಡ್ಡ ವಾಚು, ಐಷಾರಾಮಿ ಕಾರು ಬಂದ ಮೇಲೆ ಅದೆಲ್ಲಾ ಮರೆತು ಹೋಗಿದೆ. ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲರ ಸಮಾಜವಾದ, ದೇವೇಗೌಡರ ಜೊತೆಗಿನ ನಂಟು ಎಲ್ಲವೂ ಮರೆತು ಹೋಗಿದೆ. ಅವರಿಗೆ ಮರೆವು ಶುರುವಾಗಿದೆ ಎಂದರು. ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಎಸ್‌.ಮುನಿರಾಜು, ವಿಪ ಸದಸ್ಯ ಲೆಹರ್‌ ಸಿಂಗ್‌, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ್‌, ಸಹ ವಕ್ತಾರ ಅನ್ವರ್‌ ಮಾಣಿಪ್ಪಾಡಿ ಉಪಸ್ಥಿತರಿದ್ದರು.

“ಗೊಬ್ಬರ’ ಹೀಯಾಳಿಕೆಗೆ ಡಿವಿಎಸ್‌ ತಿರುಗೇಟು
ಬೆಂಗಳೂರು: ತಮ್ಮನ್ನು “ಗೊಬ್ಬರ’ ಎಂದು ಹೀಯಾಳಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶನಿವಾರವೂ ವಾಗ್ಧಾಳಿ ಮುಂದುವರಿಸಿದರು. ದುರಂಹಕಾರದಿಂದ ಒಬ್ಬ ರಾಜಕಾರಣಿ ಸಣ್ಣವರಾಗುತ್ತಿದ್ದಾರೆ ಎಂದರೆ ಅದು ಸಿದ್ದರಾಮಯ್ಯ. ಅವರ ಬಗ್ಗೆ ಮಾತನಾಡಿ ನಾನೇಕೆ ಅವರನ್ನು ದೊಡ್ಡವರನ್ನಾಗಿ ಮಾಡಲಿ. ಸಿದ್ದರಾಮಯ್ಯನವರಂತೆ ನಾನು ಏಕ ವಚನ ಬಳಸುವುದಿಲ್ಲ ಎಂದು ಕಿಡಿ ಕಾರಿದರು.

ನನ್ನನ್ನು ಗೊಬ್ಬರವೆಂದು ಹೀಯಾಳಿಸುವ ಮೂಲಕ ಸಿದ್ದರಾಮಯ್ಯ ಅವರು ರೈತರನ್ನು ಅವಮಾನ ಮಾಡಿದ್ದಾರೆ. ಗೊಬ್ಬರದಿಂದ ಬೆಳೆದ ಆಹಾರದಿಂದ ನಾವು ಮೂರು ಹೊತ್ತು ಊಟ ಮಾಡುತ್ತೇವೆ. ಆದರೆ ಸಿದ್ದರಾಮಯ್ಯ ಅವರು ಗೊಬ್ಬರವನ್ನೇ ತೆಗಳಿ ರೈತರಿಗೆ ಅವಮಾನ ಮಾಡಿದ್ದಾರೆ. ನಮ್ಮನ್ನು ಎಲ್ಲಿಯೂ ಜನ ಮನೆಗೆ ಕಳುಹಿಸಿಲ್ಲ. ಆದರೆ ಸಿದ್ದರಾಮಯ್ಯ ಅವರ ಕ್ಷೇತ್ರದ ಜನ ಅವರನ್ನು ಅಲ್ಲಿಂದ ಹೋಗುವಂತೆ ಕಳುಹಿಸಿದ್ದಾರೆ ಎಂದು ಟಾಂಗ್‌ ನೀಡಿದರು.

ಅವರ ನಡವಳಿಕೆ ನೋಡಿದರೆ ಯಾರೂ ಅವರನ್ನು ಮುಖ್ಯಮಂತ್ರಿ ಮಾಡುತ್ತಿರಲಿಲ್ಲ. ಕೆಲವರಿಗೆ ಚಾನ್ಸ್‌ ಸಿಗುತ್ತದೆ ಎನ್ನಲಾಗುತ್ತದೆ. ಅದರಂತೆ ಸಿದ್ದರಾಮಯ್ಯ ಚಾನ್ಸ್‌ನಿಂದಾಗಿ ಸಿಎಂ ಆದವರು. ಅವರೊಂದಿಗೆ ಕಾಂಗ್ರೆಸ್‌ ನಾಯಕರು ಯಾರಾದರೂ ಇದ್ದಾರೆಯೇ. ಅವರಿಗೆ ಈಗ ದೊಡ್ಡ ವಾಚ್‌ ನೀಡುವ ಕೆ.ಜೆ.ಜಾರ್ಜ್‌, ಕಾರು ಕೊಡಿಸುವ ಇನ್ನೊಬ್ಬರು ಬೇಕು. ಅವರಿಗೆ ಇಂತಹವರ ಸಹವಾಸವೇ ಮುಖ್ಯವೆನಿಸಿದೆ ಎಂದು ಕುಟುಕಿದರು.

ಹೋಟೆಲ್‌ನಲ್ಲಿ ಕುಮಾರಸ್ವಾಮಿ ಪರಿಶ್ರಮ: ಕುಮಾರಸ್ವಾಮಿಯವರು ಪರಿಶ್ರಮದ ಬಗ್ಗೆ ಮಾತನಾಡಿ ದ್ದಾರೆ. ಪರಿಶ್ರಮದ ಬಗ್ಗೆ ನಾನೇನು ಹೇಳಲು ಇಚ್ಛಿಸುವುದಿಲ್ಲ. ಏಕೆಂದರೆ ಅವರ ಪರಿಶ್ರಮ ಯಾವ ಹೋಟೆಲ್‌ನಲ್ಲಿ ನಡೆಯುತ್ತಿತ್ತು ಎಂಬುದು ಇಡೀ ಲೋಕಕ್ಕೆ ಗೊತ್ತಿದೆ. ಅವರ ಕುಟುಂಬದ ಹಿರಿಯರು, ದೊಡ್ಡ ರಾಜಕಾರಣಿಗಳಾಗಿ ಬಂದ ಕಾರಣ ಅವರು ಹೇಗೆ ಪರಿಶ್ರಮವಿಲ್ಲದೆ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ ಎಂದು ರಾಜ್ಯದ ಜನರೇ ಹೇಳುತ್ತಾರೆ. ಅವರು ನನ್ನ ಪರಿಶ್ರಮದ ಬಗ್ಗೆ ಮಾತನಾಡಿದ್ದಾರೆ. ನನ್ನ ಅಪ್ಪ, ಅಜ್ಜ, ಕುಟುಂಬದವರು, ಸಂಬಂಧಿಗಳು ಯಾರೂ ರಾಜಕಾರಣದಲ್ಲಿ ಇಲ್ಲ. ನನಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿಯೇ ಎಲ್ಲ. ಅದೇ ಕುಟುಂಬವಾಗಿ ಬೆಳೆದುಬಂದಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next