ಹುಣಸೂರು: ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಲು ಯತ್ನಿಸುತ್ತಿದ್ದಾರೆ. ಜನತೆ ಇವರ ಸಮಯಸಾಧಕ ರಾಜಕಾರಣವನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಲಿದ್ದಾರೆಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.
ಹುಣಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಅಪ್ಪನಾಣೆ ಹಾಕಿಕೊಂಡಿದ್ದರು. ನಂತರ ಸಮ್ಮಿಶ್ರ ಸರ್ಕಾರ ರಚಿಸಿ ಪರಸ್ಪರ ಕಚ್ಚಾಡಿಕೊಂಡು ಸರ್ಕಾರ ಉರುಳಿಸಿಕೊಂಡರು. ಇದೀಗ ಇಬ್ಬರೂ ಒಳ ಹೊಂದಾಣಿಕೆಯೊಂದಿಗೆ ಬಿಜೆಪಿಯನ್ನು ಸೋಲಿಸಲು ಮುಂದಾಗಿದ್ದಾರೆ. ಈ ಪಕ್ಷಗಳ ಕುತಂತ್ರ ನಡೆಯುವುದಿಲ್ಲ ಎಂದರು.
ಉಪಚುನಾವಣೆಯಲ್ಲಿ 15 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಹುಣಸೂರಿನಲ್ಲೂ ಸಹ ಹಿರಿಯ ರಾಜಕಾರಣಿ ಎಚ್. ವಿಶ್ವನಾಥ್ ಅವರನ್ನು ಗೆಲ್ಲಿಸುವ ಮೂಲಕ ಸುಭದ್ರ ಸರಕಾರಕ್ಕೆ ಜನತೆ ಸ್ಪಷ್ಟ ಬಹುಮನ ಕರುಣಿಸಲಿದ್ದಾರೆ. ಒಂದೂವರೆ ವರ್ಷಗಳ ಸಮ್ಮಿಶ್ರ ಸರ್ಕಾರದ ದುರಂತಗಳನ್ನು ಜನತೆ ಮತ್ತೆ ಮರುಕಳಿಸಬಾರದೆಂದು ಈಗಾಗಲೇ ನಿರ್ಧರಿಸಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತವರು ಜಿಲ್ಲೆ ಮೈಸೂರನ್ನು ಸಿದ್ದರಾಮಯ್ಯ ಹೇಗೆ ಕಡೆಗಣಿಸಿದ್ದಾರೆ ಎನ್ನುವುದು ಇಲ್ಲಿನ ರಸ್ತೆಗಳೇ ತಿಳಿಸುತ್ತವೆ. ಪರಿಸ್ಥಿತಿ ಹೀಗಿರುವಾಗ ಅಭಿವೃದ್ಧಿ ವಿಚಾರ ಅವರು ಮಾತನಾಡಲು ಸಾಧ್ಯವಿಲ್ಲ. ಸ್ಥಿರ ಸರ್ಕಾರ ಮತ್ತು ಅಭಿವೃದ್ಧಿ ಪರ ಸರ್ಕಾರದ ಧ್ಯೇಯ ನಮ್ಮ ಪಕ್ಷದ ಗುರಿಯಾಗಿದೆ ಎಂದು ತಿಳಿಸಿದರು.
ಅವಘಡಗಳಿಗೆ ಅವಕಾಶವಿಲ್ಲ: ಹುಣಸೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೊಡಗಿನ ಕೊಂಗನಹೊಳೆ ಎಂಬಲ್ಲಿ ನೀರು ಸಮುದ್ರ ಸೇರುತ್ತಿದ್ದು, ಈ ನೀರನ್ನು ಹುಣಸೂರು ಜನರಿಗೆ ತಲುಪಿಸುವ ಪ್ರಸ್ತಾವಿತ ಯೋಜನೆಗೆ ಕೊಡಗಿನ ಶಾಸಕರ ವಿರೋಧವಿದೆ.
ಇವರೆಲ್ಲರೂ ನಿಮ್ಮ ಪಕ್ಷದವರೇ. ಇದು ಸರಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಕೆ.ಜಿ.ಬೋಪಯ್ಯ, ಕೊಡಗು ಈಗಾಗಲೇ ಹಲವಾರು ಅವಘಡಗಳಿಗೆ ಸಾಕ್ಷಿಯಾಗಿದ್ದು, ಮತ್ತೂಂದು ಅಣೆಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆಯಷ್ಟೆ,
ಎಂದೆಂದಿಗೂ ಇಂತಹ ಕಾರ್ಯಕ್ಕೆ ನಮ್ಮ ವಿರೋಧವಿದೆ ಎಂದು ಸಂಸದ ಪ್ರತಾಪಸಿಂಹ ಬೋಪಯ್ಯ, ಅಪ್ಪಚ್ಚು ರಂಜನ್ ಧ್ವನಿಗೂಡಿಸಿದರು. ಸುದ್ದಿಗೋಷ್ಠಿಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ, ತಾಲೂಕು ಅಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ಅಭ್ಯರ್ಥಿ ಎಚ್.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.