ಬೆಂಗಳೂರು:ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ಪಕ್ಷ ಇದ್ದಂತೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನಿಂದ ದಲಿತರಿಗೆ ಸಚಿವಗಿರಿ ಕೊಟ್ಟರೂ ಜೆಡಿಎಸ್‌ನಿಂದ ಸಚಿವಗಿರಿ ಕೊಟ್ಟರೂ ಒಂದೇ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಜೆಡಿಎಸ್‌ನಿಂದ ದಲಿತರಿಗೆ ಸಚಿವಗಿರಿ ಕೊಡಲಿ ಎಂಬ ದೇಶಪಾಂಡೆ, ತಿಮ್ಮಾಪುರ ಹೇಳಿಕೆಗೆ ಟಾಂಗ್ ನೀಡಿರುವ ಅವರು, ಎರಡೂ ಪಕ್ಷಗಳು ಒಂದೇ ಆದಾಗ ದಲಿತರಿಗೆ ಯಾರು ಸಚಿವಗಿರಿ ಕೊಟ್ಟರೂ ಒಂದೇ ಅಲ್ಲವೇ ಎಂದರು.ಜೆಡಿಎಸ್‌ನ ಕೋಟಾದ ಎರಡು ಸಚಿವ ಸ್ಥಾನ ಆದಷ್ಟು ಬೇಗ ತುಂಬಲಾಗುವುದು. ಎಲ್ಲರಿಗೂ ನ್ಯಾಯ ಕೊಡಲಾಗುವುದು ಎಂದು ಹೇಳಿದರು.
ಬಿಜೆಪಿಯವರು ಆರು ತಿಂಗಳಿನಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿ ನಾವು ಸರ್ಕಾರ ರಚನೆ ಮಾಡಬಹುದು ಎಂದು ಕನಸು ಕಾಣುತ್ತಲೇ ಇದ್ದಾರೆ. ಅವರ ಆಸೆ ಈಡೇರುವುದಿಲ್ಲ ಎಂದು ತಿಳಿಸಿದರು.
ನಾನು ಬೇರೆಯವರು ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತೇನೆ. ಗೃಹ ಖಾತೆ ಬೇರೆಯವರಿಗೆ ಕೊಟ್ಟರೆ ನಾನು ಹಸ್ತಕ್ಷೇಪ ಮಾಡಲು ಆಗಲ್ಲ ಎಂದು ವಿರೋಧ ಮಾಡಿದೆ ಎಂಬೆಲ್ಲಾ ಮಾತುಗಳು ಸತ್ಯಕ್ಕೆ ದೂರ. ನಾನು ಎಂದೂ ಯಾವ ಖಾತೆಯಲ್ಲೂ ಮಧ್ಯಪ್ರವೇಶ ಮಾಡಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದರು.
ನಾನು ಎಂದಾದರೂ ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೆನಾ ಎಂದು ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಅವರನ್ನೇ ಬೇಕಾದರೆ ಕೇಳಿ ಎಂದರು.