ಮಂಡ್ಯ : ಕಾಂಗ್ರೆಸ್ ಮತ್ತು ಜೆಡಿಎಸ್ ಪರಿವಾರವಾದಿ, ಭ್ರಷ್ಟ ಪಾರ್ಟಿಗಳಾಗಿದ್ದು ಎರಡೂ ಕರ್ನಾಟಕದ ವಿಕಾಸಕ್ಕೆ ತಡೆಯಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಶುಕ್ರವಾರ ಮಂಡ್ಯದಲ್ಲಿ ಮದರ್ ಡೈರಿ ಉದ್ಘಾಟನೆಯ ಅನಂತರ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೋ ಬೇಡವೋ ? ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಬಹಳ ತೊಂದರೆ ಕೊಟ್ಟಿತು. ಮೋದಿ ಅವರು ರಾಮ ಜನ್ಮ ಭೂಮಿಯಲ್ಲಿ ಮಂದಿರಕ್ಕೆ ಶಿಲಾನ್ಯಾಸ ಮಾಡಿದರು. ಮೋದಿ ಅವರು ಕೇದಾರನಾಥ, ಬದ್ರಿನಾಥ್, ಕಾಶಿ ವಿಶ್ವನಾಥ ಮಂದಿರಗಳ ಅಭಿವೃದ್ಧಿ ಮಾಡಿದರು ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈಸೂರು ಮತ್ತು ಮಂಡ್ಯ ಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆದರೆ ಬಿಜೆಪಿ ಈ ಭಾಗಕ್ಕೆ ಹಲವು ಯೋಜನೆಗಳನ್ನು ನೀಡಿದೆ ಎಂದರು. ಈ ಭಾಗದ ರೈತರಿಗಾಗಿ 1200 ಕೋಟಿ ರೂ. ವಿಶೇಷ ಅನುದಾನ ನೀಡಿದೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರ ಕಾಲದಲ್ಲಿ ಔದ್ಯೋಗಿಕ ವಿಕಾಸ ಮಾಡುವ ಕೆಲಸ ಮಾಡಲಾಗಿದೆ. ಮೈಸೂರು ಮತ್ತು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಬಿಜೆಪಿ ಸರಕಾರದ ಕಾಲದಲ್ಲಿ ಆಯಿತು. ಮಂಡ್ಯದ ಮೈ ಶುಗರ್ ಕಾರ್ಖಾನೆ ಪುನರಾರಂಭ ಮಾಡಿದ ಬೊಮ್ಮಾಯಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಿದ್ದರಾಮಯ್ಯ ಕಾಲದಲ್ಲಿ ಪಿಎಫ್ ಐ ಕಾರ್ಯಕರತರ ಮೇಲಿನ ಕೇಸುಗಳನ್ನು ವಾಪಾಸ್ ಪಡೆದುಕೊಳ್ಳಲಾಗಿತ್ತು. ನಾವು ಸಂಘಟನೆಯನ್ನೇ ಬ್ಯಾನ್ ಮಾಡಿ ದೇಶದ್ರೋಹಿಗಳನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಿದೆವು ಎಂದರು. ಕಾಶ್ಮೀರ ನಮ್ಮಜೊತೆ ಇರಬೇಕೋ ಬೇಡವೋ? ದೇಶದ ಸುರಕ್ಷತೆ ಬೇಕೋ ಬೇಡವೋ ಎಂಬ ಪ್ರಶ್ನೆ ಕೇಳಿದರು.
ಭಾಷಣದ ಕೊನೆಯಲ್ಲಿ ಹಳೇ ಮೈಸೂರು ಭಾಗದ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಪೂರ್ಣ ಬಹುಮತದ ಬಿಜೆಪಿ ಸರಕಾರವನ್ನು ರಚಿಸಲು ಕಾರಣವಾಗಿ ಎಂದು ನಾನು ಕೈ ಮುಗಿದು ಪ್ರಾರ್ಥಿಸುತ್ತೇನೆ ಎಂದರು.
ಯಡಿಯೂರಪ್ಪ ಗೈರು
ಸಿಂಗಾಪುರ ಪ್ರವಾಸದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಅಮಿತ್ ಶಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ. ಶಾ ಅವರು ತಮ್ಮ ಮಾತಿನ ವೇಳೆ ”ಮಂಡ್ಯ ಯಡಿಯೂರಪ್ಪ ಅವರ ಹುಟ್ಟೂರು.ಅವರು ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಅವರು ಬೆಳಗ್ಗೆ ಕರೆ ಮಾಡಿದ್ದರು” ಎಂದು ತಿಳಿಸಿದರು.
ಅಮಿತ್ ಶಾ ಅವರು ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಹಕಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.