Advertisement

ರಾಜ್ಯದಲ್ಲಿ ಈ ಬಾರಿ ಬಿಜೆಪಿಗೆ ಕೇವಲ 11 ಸ್ಥಾನ?

09:40 AM Apr 05, 2019 | Hari Prasad |

ಬೆಂಗಳೂರು: 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಕಾರಣದಿಂದ 28 ಸ್ಥಾನಗಳ ಪೈಕಿ 17 ಲೋಕಸಭಾ ಸ್ಥಾನಗಳಲ್ಲಿ ಜಯಗಳಿಸಿದ್ದ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಭಾರೀ ಹೊಡೆತ ನೀಡಲಿದೆಯೇ? ಹೌದು ಎನ್ನುತ್ತಿದೆ ಪೋಲ್‌ ಐ ನಡೆಸಿರುವ ಚುನಾವಣಾ ಸಮೀಕ್ಷೆ.

Advertisement

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಸಾಧನೆ ತೋರಿದ್ದರೂ ಅಧಿಕಾರಕ್ಕೇರುವಲ್ಲಿ ವಿಫ‌ಲವಾಗಿತ್ತು. ಆ ಬಳಿಕ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರಸ್ಪರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವಂತಾಯಿತು. ಇನ್ನೂ ಮುಂದುವರೆದು ಲೋಕಸಭಾ ಚುನಾವಣೆಗೂ ಸಹ 21-7 ಮಾದರಿಯಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಇದೀಗ ಬಿಜೆಪಿ ಮತ್ತು ಮೋದಿ ವಿರುದ್ಧ ಕರ್ನಾಟಕದಲ್ಲಿ ಈ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ.

ಈ ಎಲ್ಲಾ ಬೆಳವಣಿಗೆಗಳು ಈ ಬಾರಿ ರಾಜ್ಯದಿಂದ ಶತಾಯ ಗತಾಯ 22 ಸಂಸದರನ್ನು ಸಂಸತ್ತಿಗೆ ಕಳುಹಿಸಬೇಕೆಂದು ಪಣತೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಕಮಲ ಪಕ್ಷದ ಇತರ ನಾಯಕರಿಗೆ ತಲೆನೋವಿನ ವಿಚಾರವಾಗಿದೆ. ಈ ಚುನಾವಣಾ ಪೂರ್ವ ಸಮೀಕ್ಷೆಯಂತೆ ಕರ್ನಾಟಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ 17 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಮತ್ತು ಬಿಜೆಪಿ 11 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕಳೆದ ಬಾರಿಗಿಂತ ಬಿಜೆಪಿ ಈ ಬಾರಿ 7 ಕ್ಷೇತ್ರಗಳಲ್ಲಿ ಹಿನ್ನಡೆ ಸಾಧಿಸಿದೆ. ಇನ್ನು ಮತ ಹಂಚಿಕೆ ವಿಷಯದಲ್ಲೂ ದೋಸ್ತಿ ಪಕ್ಷಗಳೇ ಮುನ್ನಡೆಯಲ್ಲಿದ್ದು ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾರೆ 51 ಪ್ರತಿಶತ ಮತಗಳಿಸುವ ನಿರೀಕ್ಷೆಯಿದ್ದರೆ ಬಿಜೆಪಿಯ ನಿರೀಕ್ಷಿತ ಮತಗಳಿಕೆಯ ಪ್ರಮಾಣ 45 ಪ್ರತಿಶತವಾಗಲಿದೆ ಎಂದು ಈ ಸಮೀಕ್ಷೆ ನುಡಿಯುತ್ತಿದೆ.

ಇನ್ನು ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯ ಬಳಿಕ ತಳಮಟ್ಟದಲ್ಲಿ ಬಿಜೆಪಿಯ ಶಕ್ತಿವರ್ಧನೆಯಾಗಿರುವುದು ಹಾಗೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಮತಹಂಚಿಕೆ ಪರಿಣಾಮಕಾರಿಯಾಗದೇ ಇರುವ ಎರಡು ಅಂಶಗಳಿಂದಾಗಿ ಹಲವಾರು ಕ್ಷೇತ್ರಗಳಲ್ಲಿ ಜಯಾಪಜಯದ ನಿರ್ಣಯ ಕಷ್ಟಸಾದ್ಯವಾಗಲಿದೆ ಎಂಬ ವಿಷಯವೂ ಈ ಸಮೀಕ್ಷೆಯಿಂದ ಬಯಲಾಗಿದೆ.

ಈ ಸಮೀಕ್ಷೆಯ ಪ್ರಕಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಗೆಲುವು 8 ಕ್ಷೇತ್ರಗಳಲ್ಲಿ ಖಚಿತವಾಗಿರುವಂತಿದೆ 4 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಪಕ್ಕಾ ಅನ್ನುವಂತಿದೆ. ಇನ್ನು 3 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವಿನ ಸಾಧ್ಯತೆ ಇದ್ದು ಮತ್ತೆ ನಾಲ್ಕರಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ತೋರಿಬರುತ್ತಿದೆ. ಆದರೆ ಇನ್ನುಳಿದ 9 ಕ್ಷೇತ್ರಗಳಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲಬಹುದು ಎಂದು ಊಹೆಮಾಡಲಾಗದಷ್ಟೂ ಟೈಟ್‌ ಫೈಟ್‌ ಇರುವುದು ಈ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

Advertisement

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಹಿಡಿತ ಬಲವಾಗಿದ್ದರೆ ತುಮಕೂರು, ಹಾಸನ, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲೂ ಮೈತ್ರಿ ಹವಾ ಜೋರಾಗಿದೆ. ಇನ್ನು ಭಾರತೀಯ ಜನತಾ ಪಕ್ಷವು ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಬಾಗಲಕೋಟೆ ಸೇರಿದಂತೆ ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ ಪ್ರಬಲವಾಗಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳು ಆಂತರಿಕ ಬಂಡಾಯ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಅಂತಿಮ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next