ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರ ಆಕ್ಷೇಪದ ಹಿನ್ನೆಲೆಯಲ್ಲಿ ಕೊನೆಗೂ ಸಿಎಂ ಸಿದ್ದರಾಮಯ್ಯ ಅವರು ಡಿಸೆಂಬರ್ 13ರಿಂದ ಆರಂಭಿಸಲು ನಿರ್ಧರಿಸಿದ್ದ ಜನಾಶೀರ್ವಾದ ರಾಲಿಯನ್ನು ರದ್ದುಪಡಿಸಿದ್ದು, ಮಾರ್ಚ್ 1ರಿಂದ ಯಾತ್ರೆ ಆರಂಭಿಸಲಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.
ಚುನಾವಣೆಯ ದೃಷ್ಟಿಕೋನದಿಂದ ಸಿಎಂ ಸಿದ್ದರಾಮಯ್ಯ ಅವರು ಡಿಸೆಂಬರ್ 15ರಿಂದ ರಾಜ್ಯಾದ್ಯಂತ ಜನಾಶೀರ್ವಾದ ರಾಲಿ ನಡೆಸಲು ವೇಳಾಪಟ್ಟಿ ನಿಗದಿಪಡಿಸಿದ್ದರು. ಆದರೆ ಪರಮೇಶ್ವರ್ ಅವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಹೈಕಮಾಂಡ್ ಗಮನಕ್ಕೂ ತಂದಿದ್ದರು.
ಇದೀಗ ಜನಾಶೀರ್ವಾದ ರಾಲಿಯ ಹೆಸರು ಬದಲಾಯಿಸಿ ಸರ್ಕಾರಿ ಯೋಜನೆಗಳ ಶಂಕುಸ್ಥಾಪನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಿದ್ದಾರೆ.
ಬಿಜೆಪಿಯ ಪರಿವರ್ತನಾ ರಾಲಿಗೆ ಸೆಡ್ಡು ಹೊಡೆದಿದ್ದ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಜನಾಶೀರ್ವಾದ ರಾಲಿ ನಡೆಸಲಿದೆ ಎಂದು ಘೋಷಿಸಿದ್ದರು.
ಆದರೆ ಸಿಎಂ ಏಕಪಕ್ಷೀಯ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಇದರಿಂದಾಗಿ ಜನಾಶೀರ್ವಾದ ರಾಲಿ ಮುಂದೂಡಿಕೆಯಾಗಿದೆ ಎಂದು ವರದಿ ತಿಳಿಸಿವೆ.