ಜಮ್ಮು: ರಾಹುಲ್ ಗಾಂಧಿ ನೇತೃತ್ವದ “ಭಾರತ್ ಜೋಡೋ” ಯಾತ್ರೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರಕ್ಕೆ ಆಗಮಿಸುವ ಮುನ್ನವೇ ಜಮ್ಮು-ಕಾಶ್ಮೀರದ ಕಾಂಗ್ರೆಸ್ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:ಬಿಜೆಪಿ ಅಧ್ಯಕ್ಷನ ಪುತ್ರನಿಂದ ಸಹಪಾಠಿ ಮೇಲೆ ಹಲ್ಲೆ; 2 ತಿಂಗಳ ಹಳೆ ವಿಡಿಯೋ ವೈರಲ್; ಕೇಸ್ ದಾಖಲು
“ಎಂಟು ವರ್ಷದ ಅಲೆಮಾರಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ನಿರ್ಲಜ್ಜವಾಗಿ ಸಮರ್ಥಿಸುವ ಮೂಲಕ 2018ರ ಕಥುವಾ ಅತ್ಯಾಚಾರ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ಮಾಜಿ ಸಚಿವ ಲಾಲ್ ಸಿಂಗ್ ಅವರ ನಡವಳಿಕೆ ಖಂಡಿಸಿ, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪಕ್ಷವನ್ನು ತೊರೆಯುತ್ತಿರುವುದಾಗಿ ದೀಪಿಕಾ ನಾಥ್ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ಲಾಲ್ ಸಿಂಗ್ ಅವರನ್ನು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಸಮಂಜಸವಲ್ಲ ಎಂದು ದೀಪಿಕಾ ಆರೋಪಿಸಿದ್ದಾರೆ.
ಲಾಲ್ ಸಿಂಗ್ ಎರಡು ಬಾರಿ ಸಂಸದರಾಗಿ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, 2014ರಲ್ಲಿ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2018ರಲ್ಲಿ ನ್ಯಾಷನಲ್ ಪಾರ್ಟಿ ಮೈತ್ರಿಕೂಟದಿಂದ ಹೊರಬಂದ ನಂತರ 2018ರಲ್ಲಿ ಪತನಗೊಂಡಿದ್ದ ಪಿಡಿಪಿ-ಬಿಜೆಪಿ ನೇತೃತ್ವದ ಸರ್ಕಾರದಲ್ಲಿಯೂ ಸಿಂಗ್ ಸಚಿವರಾಗಿದ್ದರು ಎಂದು ವರದಿ ತಿಳಿಸಿದೆ.
ದೈಹಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಮೂಲಕ ಲಾಲ್ ಸಿಂಗ್ ಇಡೀ ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿದ್ದರು. ಅಷ್ಟೇ ಅಲ್ಲ ಸಿಂಗ್ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವುದು ಕೂಡಾ ಸೈದ್ಧಾಂತಿಕವಾಗಿ ವಿರುದ್ಧವಾಗಿದೆ. ಸೈದ್ಧಾಂತಿಕವಾಗಿ ನಾನು ಇಂತಹ ವ್ಯಕ್ತಿಗಳು ಭಾಗವಹಿಸುವ ಪಕ್ಷದ ಜೊತೆ ಇರಲಾರೆ ಎಂದು ದೀಪಿಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.