Advertisement
ಬುಧವಾರ ಇಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಪಿಸಿಸಿ ವಿಭಾಗವಾರು ಮುಖಂಡರ ಸಭೆಯಲ್ಲಿ ಹಿಂದೂ ಮತಗಳು ಪಕ್ಷದಿಂದ ವಿಮುಖವಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಶೇಷವೆಂದರೆ, ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಗುಜರಾತ್‌ನಲ್ಲಿ ಕಾಂಗ್ರೆಸ್ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವುದು ರಾಹುಲ್ ಗಾಂಧಿಯವರ ನಡೆಯಿಂದಲೇ ಗೋಚರವಾಗಿದೆ. ಅಲ್ಲದೆ ದಿನಕ್ಕೊಂದು ದೇಗುಲ, ಜನಿವಾರಧಾರಿ ಬ್ರಾಹ್ಮಣ ರಾಹುಲ್, ಮೋದಿನೇ ಹಿಂದೂ ಅಲ್ಲ; ಆದರೆ ರಾಹುಲ್ ನಿಜವಾದ ಶಿವಭಕ್ತ ಎಂಬ ಕಾಂಗ್ರೆಸ್ ನಾಯಕರ ಮಾತುಗಳೂ ಇದಕ್ಕೆ ಪುಷ್ಠಿ ನೀಡಿವೆ.
Related Articles
Advertisement
ಸಿಎಂ-ಪರಂ ಸಂಘರ್ಷ ಶಮನಕ್ಕೆ ವೇಣು ಸೂತ್ರಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಯಾತ್ರೆ ವಿರುದ್ಧದ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಉಸ್ತುವಾರಿ ವೇಣುಗೋಪಾಲ್ ಸಂಧಾನ ಸೂತ್ರವಿಟ್ಟಿದ್ದಾರೆ. ಅಂದರೆ, ಕಾಂಗ್ರೆಸ್ ಶಾಸಕರೇ ಇರುವ ಕ್ಷೇತ್ರಗಳಲ್ಲಿ ಸಿಎಂ ಅವರಿಂದ ಸಾಧನೆ ಸಂಭ್ರಮ ಮತ್ತು ಕಾಂಗ್ರೆಸ್ಸೇತರ ಅಥವಾ ಕಳೆದ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಯಾತ್ರೆ ನಡೆಸುವ ಸೂತ್ರ ಮುಂದಿಟ್ಟಿದ್ದಾರೆ. ಪರಮೇಶ್ವರ್ ಜತೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇರಲಿದ್ದಾರೆ. ವೇಣುಗೋಪಾಲ್ ಅವರ ಈ ಸೂತ್ರದಿಂದ ಪರಮೇಶ್ವರ್ ಸಂತಸಗೊಂಡಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಬಜೆಟ್ ಅಧಿವೇಶನ ಮುಗಿದ ನಂತರ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಒಟ್ಟಾಗಿ ಯಾತ್ರೆ ನಡೆಸಬೇಕು ಎಂದೂ ಸೂಚಿಸಲಾಗಿದೆ ಎನ್ನಲಾಗಿದೆ. ವೇಣು ಸಭೆಗೆ ಅಂಬರೀಶ್‌ಗೈರು
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕರೆದಿದ್ದ ಮೈಸೂರು ವಿಭಾಗ ಹಾಗೂ ಮಂಡ್ಯ ಜಿಲ್ಲಾ ಮುಖಂಡರ ಸಭೆಗೆ ಅಂಬರೀಶ್ ಗೈರು ಹಾಜರಾಗಿದ್ದರು. ಪಕ್ಷದ ನಾಯಕರು ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ಅಂಬರೀಶ್ ತಲೆ ಕೆಡೆಸಿಕೊಳ್ಳದೇ ಸಭೆಯಿಂದ ದೂರ ಉಳಿದಿದ್ದರು. ಮಂಡ್ಯ ಕ್ಷೇತ್ರದಲ್ಲಿ ಮಾಜಿ ಸಂಸದೆ ರಮ್ಯಾ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿರುವುದರಿಂದ ಅಂಬರೀಶ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.