Advertisement

80 ಸ್ಥಾನದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬರೀ ಎಂಟೇ ಕ್ಷೇತ್ರ? 

06:00 AM Jul 29, 2018 | Team Udayavani |

ಲಕ್ನೋ/ಪಾಟ್ನಾ: 2019ರ ಲೋಕಸಭೆ ಚುನಾವಣೆಗಾಗಿ ಟಾರ್ಗೆಟ್‌ 150+ ಗುರಿ ಇರಿಸಿಕೊಂಡಿರುವ ಕಾಂಗ್ರೆಸ್‌, ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಕೇವಲ 8 ಸ್ಥಾನಗಳಲ್ಲಷ್ಟೇ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಒಟ್ಟು 80 ಕ್ಷೇತ್ರಗಳುಳ್ಳ ಈ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ತವರು ರಾಜ್ಯವಾಗಿದ್ದು, ಇಲ್ಲೇ ಮೈತ್ರಿ ಲೆಕ್ಕಾಚಾರದಲ್ಲಿ ಹಿನ್ನಡೆ ಅನುಭವಿಸುತ್ತಿದೆ. 

Advertisement

ಈ ಬಾರಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷ ಇತರೆ ಸಣ್ಣಪುಟ್ಟ ಪಕ್ಷಗಳ ಜತೆಗೆ ಸೇರಿ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿವೆ. ಎಸ್‌ಪಿ ಮತ್ತು ಬಿಎಸ್‌ಪಿ ಹೆಚ್ಚಿನ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್‌ ಕೂಡ ಒಂದಷ್ಟು ಹೆಚ್ಚಿನ ಕ್ಷೇತ್ರಗಳು ಸಿಗಬಹುದು ಎಂದು ನಿರೀಕ್ಷಿಸುತ್ತಿದೆ. ಆದರೆ, ಸೀಟು ಹಂಚಿಕೆ ಲೆಕ್ಕಾಚಾರದಲ್ಲಿ, ಕಳೆದ ಬಾರಿ ಗೆದ್ದ ಮತ್ತು ಎರಡನೇ ಸ್ಥಾನ ಗಳಿಸಿದ್ದ ಕ್ಷೇತ್ರಗಳನ್ನು ಆಯಾ ಪಕ್ಷಗಳಿಗೆ ಬಿಟ್ಟುಕೊಡುವ ಸಂಭವವಿದೆ. ಹೀಗಾದರೆ ಕಳೆದ ಬಾರಿ ಎರಡರಲ್ಲಿ ಗೆದ್ದಿದ್ದು, ಇತರೆ ಆರು ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಗಳಿಸಿರುವ ಕಾಂಗ್ರೆಸ್‌ಗೆ ಸಿಗುವುದು ಕೇವಲ ಎಂಟು ಸ್ಥಾನ ಎಂದು ಹೇಳಲಾಗುತ್ತಿದೆ. 

ಶನಿವಾರ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದ್ದು, ಇದರಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿದೆ. ಸ್ಥಾನ ಹಂಚಿಕೆ ಕುರಿತಂತೆ ಅಖೀಲೇಶ್‌ ಯಾದವ್‌ ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿರುವ ಪಕ್ಷ, ಯಾರಿಗೆ ಎಷ್ಟು ಕ್ಷೇತ್ರ ಸಿಗಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸಿದೆ. ಎಸ್‌ಪಿ ಮೂಲಗಳ ಪ್ರಕಾರವೇ, ಕಾಂಗ್ರೆಸ್‌ಗೆ ಸದ್ಯದ ಲೆಕ್ಕಾಚಾರದ ಪ್ರಕಾರ ಎಂಟೇ ಸ್ಥಾನ ಸಿಗಲಿವೆ. 

ಅಲ್ಲದೆ, ಪಕ್ಷದ ಹಿರಿಯ ನಾಯಕರ ಪ್ರಕಾರ, ಕಾಂಗ್ರೆಸ್‌ಗೆ ಎಂಟಕ್ಕಿಂತ ಹೆಚ್ಚು ಸ್ಥಾನ ಬಿಟ್ಟುಕೊಡುವುದು ಅಸಾಧ್ಯ. ಸಣ್ಣಪುಟ್ಟ ಪಕ್ಷಗಳಿಗೆ ಹೀಗೆ ಹೆಚ್ಚು ಸ್ಥಾನ ಬಿಡುತ್ತಾ ಹೋದರೆ, ಎಸ್‌ಪಿಗೆ ಉಳಿಯುವುದು 25-26 ಕ್ಷೇತ್ರ ಮಾತ್ರ. ಇದು ಎಸ್ಪಿ ಸ್ಥಾನಮಾನಕ್ಕೆ ಸರಿಹೊಂದುವುದಿಲ್ಲ ಎಂಬುದು ಕೆಲವು ನಾಯಕರ ಅಭಿಪ್ರಾಯ. 

ಇದಷ್ಟೇ ಅಲ್ಲ, 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಂಥ ಸಾಧನೆ ಮಾಡಲಿಲ್ಲ ಎಂಬುದು ಎಸ್‌ಪಿ ನಾಯಕರೊಬ್ಬರ ಅಭಿಪ್ರಾಯ. ಈ ಮಧ್ಯೆ, ಎಸ್‌ಪಿ ಕಾರ್ಯಕಾರಿಣಿಯಲ್ಲಿ ಇವಿಎಂ ಬಳಕೆ ವಿರೋಧಿಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ. 

Advertisement

ದಲಿತರ ಹಿತಾಸಕ್ತಿ ಕಡೆಗಣನೆ ಬೇಡ: ಜೆಡಿಯು ಕಿವಿಮಾತು
ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗಾಗಿ ಸುಗ್ರೀವಾಜ್ಞೆ ಜಾರಿಗೊಳಿಸುವಂತೆ ಎಲ್‌ಜೆಪಿ ಶುಕ್ರವಾರ ಒತ್ತಡ ಹೇರಿದ ಬೆನ್ನಲ್ಲೇ ಜೆಡಿಯು ಕೂಡ ದಲಿತರ ಹಿತಾಸಕ್ತಿ ಕಡೆಗಣಿಸಬಾರದು ಎಂದು ಎಚ್ಚರಿಕೆ ನೀಡಿದೆ. ಪಾಟ್ನಾದಲ್ಲಿ “ನ್ಯೂಸ್‌18′ ಜತೆಗೆ ಮಾತನಾಡಿದ ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ, ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅಭಿಪ್ರಾಯಕ್ಕೆ ಬೆಂಬಲ ಸೂಚಿಸುವು ದಾಗಿ ಹೇಳಿದ್ದಾರೆ. ದಲಿತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಎಲ್‌ಜೆಪಿ ಸೇರುತ್ತಿದೆ ಎಂದಾದರೆ ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಲಾಗಿದೆ ಎಂದು ತಿಳಿಯಬೇಕಾಗುತ್ತದೆ. ಸರ್ಕಾರ ಯಾವತ್ತಿದ್ದರೂ ಬಡವರ ಪರವೇ ಆಗಿರಬೇಕು. ಅವರ ಹಿತಾಸಕ್ತಿಗಳನ್ನು ಮೊದಲ ಹಂತದಲ್ಲಿಯೇ ಗಮನಿಸಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ ತ್ಯಾಗಿ.

ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸೋನಿಯಾ ಗಾಂಧಿ ಅವರ ಪಾತ್ರ ದೊಡ್ಡದು. ಎಲ್ಲಾ ಪಕ್ಷಗಳನ್ನು ಕಾಂಗ್ರೆಸ್‌ ಒಂದು ಮಾಡಿದಲ್ಲಿ ಮಾತ್ರ ಬಿಜೆಪಿಯನ್ನು ಯಶಸ್ವಿಯಾಗಿ ಎದುರಿಸುವುದು ಸಾಧ್ಯವಾಗುತ್ತದೆ. 
ಒಮರ್‌ ಅಬ್ದುಲ್ಲಾ, ಜಮ್ಮು ಕಾಶ್ಮೀರ ಮಾಜಿ ಸಿಎಂ

ಸಮಾಜವಾದಿ ಪಕ್ಷದಿಂದಲೇ ಮುನ್ಸೂಚನೆ 
ಲೆಕ್ಕಾಚಾರದಲ್ಲಿ ಕಳೆದ ಬಾರಿ ಗೆದ್ದ, 2ನೇ ಸ್ಥಾನ ಗಳಿಸಿದ ಕ್ಷೇತ್ರಗಳಷ್ಟೇ ಹಂಚಿಕೆ
ಆರರಲ್ಲಿ ದ್ವಿತೀಯ, ಎರಡರಲ್ಲಿ ಗೆದ್ದಿದ್ದ ಕಾಂಗ್ರೆಸ್‌ಗೆ ಸಿಗುವುದು 8 ಮಾತ್ರ

Advertisement

Udayavani is now on Telegram. Click here to join our channel and stay updated with the latest news.

Next