ಮಂಗಳೂರು, ಮೇ 29: ಅಧಿಕಾರಕ್ಕೆ ಬಂದು ಹತ್ತು ದಿನಗಳಾದರೂ ಗ್ಯಾರಂಟಿಗಳನ್ನು ಜಾರಿಗೊಳಿಸದ ಕಾಂಗ್ರೆಸ್, ಈಗ ಚುನಾವಣಾ ಪೂರ್ವದಲ್ಲಿ ಘೋಷಿಸದ ಷರತ್ತುಗಳನ್ನು ವಿಧಿಸಲು ಹೊರಟಿರುವುದು ಜನವಿರೋಧಿನಡೆ ಎಂದು ಶಾಸಕ ವೇದವ್ಯಾಸ ಕಾಮತ್ ಟೀಕಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸಮುದಾಯಗಳ ಮಧ್ಯೆ ಒಡಕು ಮೂಡಿಸಿ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆಪಾದಿಸಿದರು.
ಕೇಂದ್ರ ಸರಕಾರವು 5ಕೆ.ಜಿ ಅಕ್ಕಿ ನೀಡುತ್ತಿದ್ದು, ರಾಜ್ಯ ಸರಕಾರ ತನ್ನ ಮಾತಿನಂತೆ ಹತ್ತು ಕೆ.ಜಿ,. ಅಕ್ಕಿಯನ್ನು ಪ್ರತ್ಯೇಕವಾಗಿ ವಿತರಿಸಲಿ. ಜತೆಗೆ ಬಿಜೆಪಿ ಸರಕಾರದ ಅವಧಿಯ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಅನು ದಾನವನ್ನು ತಡೆಹಿಡಿದು ರಾಜಕೀಯ ಹಗೆತನ ಸಾಧಿಸಲು ಹೊರಟಿರುವ ಕಾಂಗ್ರೆಸ್ ನದ್ದು ಅಭಿವೃದ್ಧಿ ವಿರೋಧಿ ನಡೆ ಎಂದು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸತ್ಯಸಾರಮಣಿ ದೈವದ ಮೇಲೆ ಪ್ರಮಾಣ ಮಾಡಿ ಪ್ರತಿಜ್ಞೆ ಸ್ವೀಕರಿಸಿರುವುದನ್ನು ವಿರೋಧಿಸಿದ ಸಿಎಂ ಸಿದ್ದರಾಮಯ್ಯ ಅವರು ತುಳುನಾಡಿನ ದೈವ, ದೇವರಿಗೆ ಅಪಮಾನ ಮಾಡಿದ್ದಾರೆ. ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಸ್ಥಗಿತಗೊಳಿಸುವ ಬಗ್ಗೆ ಮಾತು ಕೇಳಿ ಬರುತ್ತಿದೆ. ಈ ಮೂಲಕ ಅನಗತ್ಯ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ ಎಂದರು.
ತುಳು ಭಾಷೆಗೆ ಮಾನ್ಯತೆ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ. ಬಳಿಕ ಡಾ| ಎಂ. ಮೋಹನ ಆಳ್ವ ಅವರ ನೇತೃತ್ವದಲ್ಲಿ ಸಮಿತಿ ವರದಿಯನ್ನೂ ಸಲ್ಲಿಸಿದೆ. ಬಿಜೆಪಿಯು ಶೇ. 95ರಷ್ಟು ಕೆಲಸ ಪೂರ್ಣಗೊಳಿಸಿದ್ದು, ಸರಕಾರ ಕೂಡಲೇ ಅಧಿಕೃತ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.
ಉಪಮೇಯರ್ ಪೂರ್ಣಿಮಾ, ಬಿಜೆಪಿ ಮುಖಂಡರಾದ ವಿಜಯಕುಮಾರ್ ಶೆಟ್ಟಿ, ನಿತಿನ್ ಕುಮಾರ್, ರವಿಶಂಕರ ಮಿಜಾರು, ಪ್ರೇಮಾನಂದ ಶೆಟ್ಟಿ, ರೂಪಾ ಬಂಗೇರ, ಸುರೇಂದ್ರ ಜಪ್ಪಿನಮೊಗರು ಉಪಸ್ಥಿತರಿದ್ದರು.