ಬೆಂಗಳೂರು: ಕಾಂಗ್ರೆಸ್ ನಾಯಕರು ರಾಜಕೀಯ ನಿರುದ್ಯೋಗಿಗಳಾಗಿರುವುದರಿಂದ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ದಿನ ಸುದ್ದಿಯಲ್ಲಿರಲು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಅಜ್ಞಾನಕ್ಕೆ ನಗಬೇಕಷ್ಟೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕಾಂಗ್ರೆಸ್ ನವರು ರಾಜಕೀಯವಾಗಿ ಕ್ರಿಯಾಶೀಲರಾಗಿರಲು ಈ ರೀತಿಯ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಮಾಜಿ ಶಾಸಕರು ಈ ಹೇಳಿಕೆ ನೀಡಿದ್ದರೆ, ಅದಕ್ಕೆ ಅವರೇ ಜವಾಬ್ದಾರಿಯುತರಾಗುತ್ತಾರೆಯೇ ಹೊರತು, ಅದಕ್ಕೆ ಪಕ್ಷವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಹಿರಿಯರು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತಿ ಕಡಿಮೆ ಅವಧಿಯಲ್ಲಿ ರೈತರು, ಮಹಿಳೆಯರು, ಯುವಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಡಳಿತವನ್ನು ಉತ್ತಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಕೇಂದ್ರ ನಾಯಕರ ಜೊತೆಗೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಅವರು ಆಗಾಗ್ಗೆ ದೆಹಲಿಗೆ ಹೋಗುತ್ತಾರೆ. ಇದು ಸಹಜ ವಿಚಾರ ಎಂದರು.
ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ನಿರಾಕರಿಸಿದರೆ ಕಠಿಣ ಕ್ರಮ: ಡಾ.ಕೆ.ಸುಧಾಕರ್
ಕಾಂಗ್ರೆಸ್ ಡಬಲ್ ಡೋರ್ ಬಸ್: ಕಾಂಗ್ರೆಸ್ ಈಗ ಡಬಲ್ ಡೋರ್ ಬಸ್ ನಲ್ಲಿದೆ. ಈ ಬಸ್‌ನಿಂದ ಯಾರನ್ನು ಮೊದಲು ಇಳಿಸುತ್ತಾರೋ ಗೊತ್ತಿಲ್ಲ. ಈ ಬಸ್‌ಗೆ ಎರಡು ಸ್ಟೇರಿಂಗ್ ಇದ್ದು, ಒಬ್ಬರು ಒಂದು ಕಡೆ ತಿರುಗಿಸಿದರೆ, ಮತ್ತೊಬ್ಬರು ಇನ್ನೊಂದು ಕಡೆಗೆ ತಿರುಗಿಸುತ್ತಿದ್ದಾರೆ. ಈ ಬಸ್ ಯಾವ ಕಡೆಗೆ ಹೋಗುವುದೋ ಗೊತ್ತಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.