ಕಂಥಿ/ಕೊಚ್ಚಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ನೇಮಿಸಿದ್ದರಿಂದ ಕಾಂಗ್ರೆಸ್ “ಮೂರನೇ ಜಿ’ ಹೊಂದಿದಂತಾಗಿದೆ. ಈಗಾಗಲೇ 2 “ಜಿ’ಗಳು ಅಂದರೆ ಸೋನಿಯಾ ಜಿ ಮತ್ತು ರಾಹುಲ್ ಜಿ ಇದ್ದಾರೆ. ಅವರಿಬ್ಬರ ವಿರುದ್ಧ ಗುರುತರ ಭ್ರಷ್ಟಾಚಾರದ ಆರೋಪಗಳಿವೆ. ಈಗ ಅದಕ್ಕೆ ಪ್ರಿಯಾಂಕಾಜೀ ಸೇರ್ಪಡೆ ಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಪಶ್ಚಿಮ ಬಂಗಾಲದ ಕಂಥಿ ಮತ್ತು ಒಡಿಶಾದ ಕುಲಿಯಾದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಿದ್ದಾರೆ. ಕಂಥಿಯಲ್ಲಿ ಮಾತನಾಡಿದ ಶಾ, ವಂಶಪಾರಂಪರ್ಯವಾಗಿ ಆಡಳಿತ ನಡೆಸುವ ಪಕ್ಷ ದೇಶ ಸೇವೆ ಮಾಡಲು ಸಾಧ್ಯವಿಲ್ಲ. ಬದಲಿಗೆ ಅಸಹಾಯಕ ಸರ್ಕಾರ ಮಾತ್ರ ನೀಡಲು ಸಾಧ್ಯ ಎಂದು ಲೇವಡಿ ಮಾಡಿದ್ದಾರೆ.
ಬಂಗಾಳ ಉದ್ವಿಗ್ನ: ಅಮಿತ್ ಶಾ ಅವರು ಭಾಷಣ ಮಾಡಿ ತೆರಳುತ್ತಿ ದ್ದಂತೆಯೇ, ರ್ಯಾಲಿ ನಡೆದ ಸ್ಥಳದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಉಭಯ ಬಣದಿಂದ ಕಲ್ಲು ತೂರಾಟ ನಡೆದಿದ್ದು, ತಕ್ಷಣವೇ ಕ್ಷಿಪ್ರ ಕಾರ್ಯಪಡೆಯನ್ನು (ಆರ್‌ಎಎಫ್) ಕರೆಯಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಸಿಎಂ ಮಮತಾ ಬ್ಯಾನರ್ಜಿಗೆ ಕರೆ ಮಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ, ತನ್ನ ಕಚೇರಿಯೊಂದನ್ನು ಬಿಜೆಪಿ ಧ್ವಂಸ ಮಾಡಿದೆ ಎಂದು ಟಿಎಂಸಿ ಆರೋಪಿಸಿದೆ.
15 ಮಂದಿಗೆ ಮಾತ್ರ: ಕೇರಳದಲ್ಲಿ ಕಾಂಗ್ರೆಸ್ ಪರ ಲೋಕಸಭೆ ಪ್ರಚಾರ ಆರಂಭಿಸಿದ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಕೇವಲ 15 ಮಂದಿ ಸ್ನೇಹಿತರಿಗೆ ಮಾತ್ರ ಕನಿಷ್ಠ ಆದಾಯ ಬರುವಂತೆ ಮಾಡಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ. ಕೊಚ್ಚಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನಿಯಮಕ್ಕೆ ಅನುಮೋದನೆ ಪಡೆದು ಜಾರಿಗೊಳಿಸಲಿದೆ ಎಂದಿದ್ದಾರೆ.
ರಾಮನಂತೆ ರಾಹುಲ್
ಫೆ.3ರಂದು ಪಾಟ್ನಾದಲ್ಲಿ ಕಾಂಗ್ರೆಸ್ ಜನಾಕ್ರೋಶ ರ್ಯಾಲಿ ನಿಗದಿಯಾಗಿದೆ. ಅದಕ್ಕೆ ಪೂರಕವಾಗಿ ಬಿಹಾರದ ರಾಜಧಾನಿಯಲ್ಲಿ ಪ್ರಕಟವಾಗಿರುವ ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿಯವರನ್ನು ಶ್ರೀರಾಮನಂತೆ ಚಿತ್ರಿಸಲಾಗಿದೆ. ಪ್ರಧಾನಿ ಮೋದಿಯವರಿಗಿಂತ ರಾಹುಲ್ ಗಾಂಧಿಯವರಿಗೇ ಶ್ರೀರಾಮನ ಗುಣಲಕ್ಷಣಗಳಿವೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.