Advertisement

ಪ್ರತಿಪಕ್ಷವಾಗಿ ವಿರೋಧಕ್ಕಿಂತ ಜವಾಬ್ದಾರಿ ಮೆರೆದ ಕಾಂಗ್ರೆಸ್‌

08:27 AM May 10, 2020 | Sriram |

ಬೆಂಗಳೂರು: ಕೋವಿಡ್‌-19 ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ರಾಜ್ಯದಲ್ಲಿ ಸರ್ಕಾರದ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡದೇ ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಸಹಕಾರ ನೀಡುವ ಮೂಲಕ ಜಾಣ್ಮೆ ಮೆರೆದಿದೆ. ಜತೆಗೆ, ಪಕ್ಷದ ನಾಯಕರು ಆಂತರಿಕ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್‌-19 ಲಾಕ್‌ಡೌನ್‌ ಘೋಷಣೆ ಆದ ಕೂಡಲೇ ಕಾಂಗ್ರೆಸ್‌ ಅಧಿಕೃತವಾಗಿ ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಘೋಷಿಸಿತು. ಕೋವಿಡ್‌-19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌
ರಚಿಸಲಾಯಿತು. ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದಲ್ಲೂ ಕಾರ್ಯಪಡೆ ರಚಿಸಿತು.

ಹಾಲಿ ಶಾಸಕರು, ಮಾಜಿ ಶಾಕಸರು ಹಾಗೂ ಪಕ್ಷದ ಸ್ಥಳೀಯ ಮುಖಂಡರ ನೆರವಿನಿಂದ ಸುಮಾರು 1 ಕೋಟಿ 24 ಲಕ್ಷ ಜನರಿಗೆ ಊಟದ ಪೊಟ್ಟಣಗಳನ್ನು ಹಂಚಿಕೆ ಮಾಡಿದೆ. ಅದೇ ರೀತಿ ರೈತರು ಬೆಳೆದ ತರಕಾರಿ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದರಿಂದ ರಾಜ್ಯಾದ್ಯಂತ ಸುಮಾರು ನೂರು ಕೋಟಿ ರೂಪಾಯಿಗಳ ತರಕಾರಿ ಖರೀದಿಸಿ 1.47 ಕೋಟಿ ಜನರಿಗೆ ಉಚಿತವಾಗಿ ವಿತರಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಇದರ ಜತೆಗೆ, 34 ಲಕ್ಷ ಮಾಸ್ಕ್ ವಿತರಣೆ, 5 ಲಕ್ಷ ಸ್ಯಾನಿಟರ್‌ ಬಾಟಲಿಗಳ ವಿತರಣೆ, 74 ಲಕ್ಷ ಆಹಾರ ಧಾನ್ಯ ಕಿಟ್‌ ವಿತರಣೆ ಮಾಡಲಾಗಿದೆ. ಪಕ್ಷದ ವತಿಯಿಂದ ಆರಂಭಿಸಿರುವ ಕೋವಿಡ್‌-19 ನಿಯಂತ್ರಣ ಸೆಲ್‌ಗೆ 26 ಸಾವಿರ ಫೋನ್‌ ಕರೆಗಳು ಬಂದಿದ್ದು, ಇತರೆ ರೋಗಗಳಿಂದ ಬಳಲುತ್ತಿರುವ ಸುಮಾರು 1800 ರೋಗಿಗಳಿಗೆ ಟೆಲಿ ಮೆಡಿಸಿನ್‌ ಚಿಕಿತ್ಸೆ ನೀಡಿ, 3.5 ಲಕ್ಷ ಬೆಲೆಯ ಔಷಧ ವಿತರಿಸಲಾಗಿದೆ.

ಒಗ್ಗಟ್ಟು ಪ್ರದರ್ಶನ
ಕೋವಿಡ್‌-19 ನಂತರ ಪಕ್ಷದಲ್ಲಿ ಒಗ್ಗಟ್ಟು ಪ್ರದರ್ಶನವೂ ಕಂಡು ಬಂದಿದ್ದು ಪಕ್ಷದ ಕಚೇರಿಗೆ ಅಪರೂಪಕ್ಕೆ ತೆರಳುತ್ತಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆಯುವ ಎಲ್ಲ ಸಭೆಗಳಲ್ಲಿಯೂ ಪಾಲ್ಗೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅದೇ ರೀತಿ ಪ್ರತಿಪಕ್ಷದ ನಾಯಕನಾಗಿ ಕೋವಿಡ್‌-19 ಸಂಬಂಧ ಸಿದ್ದರಾಮಯ್ಯ ನಡೆಸಿದ ಎಲ್ಲ ಸಭೆಗಳಿಗೂ ಡಿ.ಕೆ.ಶಿವಕುಮಾರ್‌ ಹಾಜರಾಗುತ್ತಿದ್ದಾರೆ.

Advertisement

ಕೋವಿಡ್‌-19 ಲಾಕ್‌ಡೌನ್‌ ಸಡಿಲಿಕೆ ಮಾಡಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇರವಾಗಿ ಕಾರ್ಮಿಕರ ಬಳಿ ತೆರಳುವ ಮೂಲಕ ಸಿದ್ದರಾಮಯ್ಯ ಅವರೂ ತಮ್ಮ ಜೊತೆಗೆ ಬರುವಂತೆ ನೋಡಿಕೊಂಡರು. ಮುಖ್ಯಮಂತ್ರಿಗಳ ಭೇಟಿ, ಮುಖ್ಯಕಾರ್ಯದರ್ಶಿ ಭೇಟಿಗೂ ಇಬ್ಬರೂ ಒಟ್ಟಿಗೆ ತೆರಳಿದರು. ಕೋವಿಡ್‌-19ದಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ಕುಶಲಕರ್ಮಿಗಳು, ಸಮಾಜದ ವಿವಿಧ ವರ್ಗದ ಜನರಿಗೆ ಸರ್ಕಾರ ನೆರವಿಗೆ ಬರುವಂತೆ ಬೀದಿಗಿಳಿದು ಪ್ರತಿಭಟನೆ ಮಾಡದೇ ನೇರವಾಗಿ ಮುಖ್ಯಮಂತ್ರಿಯವರನ್ನೇ ಭೇಟಿ ಮಾಡಿ ಒತ್ತಡ ಹೇರುವ ಮುಖಾಂತರ ಜವಾಬ್ದಾರಿಯುತ ಪ್ರತಿಪಕ್ಷದ ಕೆಲಸ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next