ದಾವಣಗೆರೆ: ವಿದೇಶಗಳಿಗೆ ಹೋಗಿ ಭಾರತಕ್ಕೆ ಅಪಮಾನವಾಗುವ ರೀತಿಯಲ್ಲಿ ಮಾತನಾಡುತ್ತಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅಂಥವರಿಂದಾಗಿಯೇ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಕುಸಿಯುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಯೂ ಕಾಂಗ್ರೆಸ್ಸನ್ನು ತಿರಸ್ಕರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿ ನಡೆಯುವ “ಬಿಜೆಪಿಯ ಮಹಾಸಂಗಮ’ ಸಮಾವೇಶ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಸಿದ್ಧತೆ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಭಾರತದಲ್ಲಿ ಸಂವಿಧಾನ ಆತಂಕದಲ್ಲಿದ್ದು ಪ್ರಜಾಪ್ರಭುತ್ವ ಉಳಿಸುವಂತೆ ಅಮೆರಿಕ-ಯೂರೋಪ್ ದೇಶಗಳಲ್ಲಿ ರಾಹುಲ್ ಗಾಂಧಿ ಕೇಳುತ್ತಿದ್ದಾರೆ. ಅವರು ವಿದೇಶಗಳಲ್ಲಿ ಭಾರತದ ಬಗ್ಗೆ ಆಡುತ್ತಿರುವ ಮಾತುಗಳನ್ನು ಜನ ಗಮನಿಸುತ್ತಿದ್ದಾರೆ. ಭಾರತಕ್ಕೆ ಅಪಮಾನ ಮಾಡುತ್ತಿರುವ ರಾಹುಲ್‌ರನ್ನು ದೇಶದ ಜನ ಎಂದಿಗೂ ಸಹಿಸುವುದಿಲ್ಲ ಹಾಗೂ ಕ್ಷಮಿಸುವುದಿಲ್ಲ. ಜನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ದಾವಣಗೆರೆಯಲ್ಲಿ ಮಾ. 25ರಂದು ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನ ಸೇರುವ ರಾಜ್ಯದ ಐತಿಹಾಸಿಕ ಸಮಾವೇಶ ಇದಾಗಲಿದೆ. ರಾಜ್ಯದ ಜನತೆಯನ್ನುದ್ದೇಶಿಸಿ ಪ್ರಧಾನಿಯವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ನಾಲ್ಕು ದಿಕ್ಕುಗಳಿಂದ ಬರುವ ವಿಜಯ ಸಂಕಲ್ಪ ಯಾತ್ರೆಗಳು ದಾವಣಗೆರೆಯಲ್ಲಿ ಮಹಾ ಸಂಗಮವಾಗಲಿವೆ. ಬಿಜೆಪಿ ಯಾತ್ರೆಗೆ ಜನ ಅಭೂತಪೂರ್ವವಾಗಿ ಸ್ಪಂದಿಸುತ್ತಿದ್ದಾರೆ. ಕರ್ನಾಟಕದ ಬಗ್ಗೆ ಮೋದಿ ಅವರಿಗೆ ವಿಶೇಷ ಪ್ರೀತಿ-ಅಭಿಮಾನವಿದೆ. ಸಮಾವೇಶಕ್ಕೆ ಬರುವ ಬಡವರು, ದೀನ ದಲಿತರು, ಮಹಿಳೆಯರು, ಯುವಕ-ಯುವತಿಯರು, ಹಿರಿಯರು ಹೀಗೆ ಎಲ್ಲರಿಗೂ ಖುದ್ದಾಗಿ ಅಭಿನಂದಿಸಲು ಮೋದಿಯವರು ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದರು.
ರಾಜ್ಯದೆಲ್ಲೆಡೆ ಬಿಜೆಪಿ ಅಲೆ
ರಾಜ್ಯದಲ್ಲಿ ಎಲ್ಲೆಡೆ ಬಿಜೆಪಿ ಪರ ಅಲೆ ವ್ಯಕ್ತವಾಗಿದೆ. ಡಬಲ್‌ಎಂಜಿನ್ ಬಿಜೆಪಿ ಸರ್ಕಾರದ ಜನಪರ ಕಾಳಜಿ, ಅಭಿವೃದ್ಧಿ ಮಂತ್ರ, ಎಲ್ಲ ವರ್ಗದ ಜನರಿಗೆ ಸ್ಪಂದನೆ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದ ಅರುಣ್ ಸಿಂಗ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ’ ಬಸ್ ಯಾತ್ರೆಯೇ ಕಾಣುತ್ತಿಲ್ಲ ಎಂದು ಟೀಕಿಸಿದರು.
ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ಮಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.