ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬೋಗಸ್ ಆಶ್ವಾಸನೆ ಕೊಟ್ಟು ಜನರಿಗೆ ಕತ್ತಲೆ ಗ್ಯಾರಂಟಿ ಮಾಡಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಂದು ಕಡೆ ಉಚಿತ ವಿದ್ಯುತ್ ಎಂದು ಹೇಳುತ್ತಿದೆ. ಮತ್ತೊಂದು ಕಡೆ ಅನಿಯಮಿತ ವಿದ್ಯುತ್ ನಿಲುಗಡೆ ಮಾಡುತ್ತಿದೆ. ಜನರ ವಿಚಾರದಲ್ಲಿ ಕಾಂಗ್ರೆಸ್ ಅತ್ಯಂತ ಬೇಜಾಬ್ದಾರಿಯಾಗಿ ವರ್ತಿಸುತ್ತಿದೆ ಎಂದರು.
ಇದನ್ನೂ ಓದಿ:Pramoda Devi: ಪಾರಂಪರಿಕ ಕಟ್ಟಡ ಜೀರ್ಣೋದ್ಧಾರವಾಗಲಿ; ಪ್ರಮೋದಾದೇವಿ ಒಡೆಯರ್
ಕೇಂದ್ರದಿಂದ ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಪೂರೈಕೆ ಆಗುತ್ತಿದೆ. ಮೋದಿ ಸರಕಾರ ಬಂದ ನಂತರ ವಿದ್ಯುತ್ ಉತ್ಪಾದನೆ ಹೆಚ್ಚಳ ವಿಚಾರವಾಗಿ ಹಲವು ಕ್ರಮ ಕೈಗೊಳ್ಳಲಾಗಿದ್ದು, ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡಲಾಗಿದೆ. ಕರ್ನಾಟಕಕ್ಕೆ ಕೇಂದ್ರ ಸರಕಾರ ನೀಡಿದ ಭರವಸೆಗಿಂತ ಹೆಚ್ಚಿನ ಕಲ್ಲಿದ್ದಲು ನೀಡಿದ್ದೇವೆ. 39 ಸಾವಿರ ಟನ್ ಕಲ್ಲಿದ್ದಲು ಕೊಡುತ್ತಿದ್ದೇವೆ. ದಿನಕ್ಕೆ 39 ಸಾವಿರ ಟನ್, ಎಲ್ಲ ಸೇರಿ 49 ಸಾವಿರ ಟನ್ ಕಲ್ಲಿದ್ದಲು ಕೊಡುತ್ತಿದ್ದೇವೆ. ಕಳೆದ ಏಳು ದಿನದಲ್ಲಿ 56 ಸಾವಿರ ಟನ್ ಕಲ್ಲಿದ್ದಲು, ರೇಖು ಪೂರೈಕೆ ಆಗುತ್ತಿದೆ. ಇದುವರೆಗೆ ರಾಜ್ಯ ಸರಕಾರ ನಮ್ಮ ಇಲಾಖೆಗೆ 683 ಕೋಟಿ ರೂ ಕಲ್ಲಿದ್ದಲು ಪಡೆದ ಬಾಕಿ ನೀಡಬೇಕಾಗಿದೆ ಎಂದರು.
ಮುಂದಾಲೋಚನೆ ಇಲ್ಲದೆ ಉಚಿತ ವಿದ್ಯುತ್ ಎಂದು ದೊಡ್ಡದಾಗಿ ಹೇಳಿದ್ದ ಕಾಂಗ್ರೆಸ್ ಇದೀಗ ಜನರಿಗೆ ಕತ್ತಲೆ ಭಾಗ್ಯ ಉಚಿತವಾಗಿ ನೀಡುತ್ತಿದೆ ಎಂದು ಟೀಕಿಸಿದರು.