ಬೆಂಗಳೂರು: ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆಗೆ
ಪರ್ಯಾಯವಾಗಿ ಕಾಂಗ್ರೆಸ್ ಹಮ್ಮಿಕೊಳ್ಳಲು ಉದ್ದೇಶಿಸಿರುವ “ಜನಾಶೀರ್ವಾದ ಯಾತ್ರೆ’ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯಲಿದೆ.
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪರ್ಯಾಯವಾಗಿ ಕಾಂಗ್ರೆಸ್‌ನಿಂದ ಜನಾಶೀರ್ವಾದ ಯಾತ್ರೆಯನ್ನು ಡಿಸೆಂಬರ್‌ನಿಂದ ಆರಂಭಿಸಲು ಈ ಹಿಂದೆ ಕಾಂಗ್ರೆಸ್ ಯೋಚಿಸಿತ್ತು. ಆದರೆ, ಕಾಂಗ್ರೆಸ್‌ನ ಯಾತ್ರೆ ಮಾರ್ಚ್‌ನಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖಚಿತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಜಿಲ್ಲಾಮಟ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ಕಾರ್ಯಕ್ರಮಗಳ ಪ್ರವಾಸದಲ್ಲಿ ನಿರತನಾಗಿದ್ದೇನೆ. ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನಡೆಯುತ್ತಿದೆ. ಡಿ.13ರ ನಂತರ ಈ ಕೆಲಸ ಇನ್ನಷ್ಟು ಚುರುಕಾಗಲಿದೆ. ಬಳಿಕ ಪಕ್ಷದ ವತಿಯಿಂದ ಜನಾಶೀರ್ವಾದ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು.
ಬಿಜೆಪಿಯ ಪರಿವರ್ತನಾ ಯಾತ್ರೆಗೆ ಪರ್ಯಾಯವಾಗಿ ಕಾಂಗ್ರೆಸ್‌ನಿಂದ ಡಿಸೆಂಬರ್‌ನಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿತ್ತಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವೇನು ಬಿಜೆಪಿಯವರಂತೆ ಪರಿವರ್ತನೆ, ಪರಿವರ್ತನೆ ಎಂದು ತಮಟೆ ಹೊಡೆದುಕೊಂಡು ಹೋಗಬೇಕೇ? ನಾವೇನು ಬಿಜೆಪಿಯವರಂತೆ ಕೆಲಸ ಇಲ್ಲದೆ ಕುಳಿತಿಲ್ಲ. ನಮಗೆ ಸಾಕಷ್ಟು ಕೆಲಸಗಳಿದ್ದು, ಆಡಳಿತ ನಡೆಸಬೇಕು, ಕಡತ ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಸರ್ಕಾರದ ವತಿಯಿಂದ ನಡೆಸುತ್ತಿರುವ ಕಾರ್ಯಕ್ರಮಗಳಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಾರದೇ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರು ಒಂದು ಪಕ್ಷದ ಅಧ್ಯಕ್ಷರು. ಪಕ್ಷದ ಅಧ್ಯಕ್ಷರು ಸರ್ಕಾರದ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಬರುವುದಿಲ್ಲ ಅಷ್ಟೆ. ಆ ವಿಚಾರದಲ್ಲಿ ಏನೇನೋ ಊಹಾಪೋಹಗಳನ್ನು ಸೃಷ್ಟಿಸುವುದು ಸರಿಯಲ್ಲ. ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಬರುತ್ತಾರೆ, ನಾನೂ ಹೋಗುತ್ತೇನೆ ಎಂದರು.