ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು 2016ರ ನ.8ರಂದು ಕೈಗೊಂಡಿದ್ದ ನೋಟು ಅಮಾನ್ಯ ಕ್ರಮಕ್ಕೆ ಎರಡು ವರ್ಷ ತುಂಬಿದ ಸುಮುಹೂರ್ತದಂದೇ “ಥಗ್ಸ್ ಆಫ್ ಹಿಂದುಸ್ಥಾನ್’ (Thugs of Hindostan) ಚಿತ್ರ ಬಿಡುಗಡೆಗೊಂಡಿರುವುದು ಕಾಕತಾಳೀಯವೂ ಸಾಂಕೇತಿಕವೂ ಆಗಿದೆ ಎಂದು ಲೇವಡಿ ಮಾಡಿರುವ ಕಾಂಗ್ರೆಸ್ ಪಕ್ಷ, ಇವೆರಡಕ್ಕೂ ಇರುವ ವಿಶಿಷ್ಟ ನಂಟನ್ನು ಸಂಶೋಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರಕಾರದ ಕೆಲವೇ ಕೆಲವು ಕೃಪಾಪೋಷಿತ ಬಂಡವಾಳಶಾಹಿ ಉದ್ಯಮಿಗಳಿಗೆ ಲಾಭ ಮಾಡಿಕೊಡಲು ದೇಶವನ್ನೇ ಲೂಟಿ ಮಾಡುವ ನೋಟು ಅಮಾನ್ಯ ಕ್ರಮವನ್ನು ತೆಗೆದುಕೊಂಡಿದ್ದರು ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಪುನರುಚ್ಚರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಎನ್‌ಡಿಎ ಸರಕಾರದ ಹುದ್ದರಿಗಳನ್ನು “ಥಗ್ಸ್ ಆಫ್ ಹಿಂದುಸ್ಥಾನ್’ ಎಂದು ಲೇವಡಿ ಮಾಡಿರುವ ಕಾಂಗ್ರೆಸ್ ಪಕ್ಷ, ನೋಟು ಅಮಾನ್ಯಕ್ಕೆ ಎರಡು ವರ್ಷ ತುಂಬಿದ ದಿನವೇ ಆ ಹೆಸರಿನ ಚಿತ್ರ (ಆಮೀರ್ ಖಾನ್, ಅಮಿತಾಭ್ ಬಚ್ಚನ್ ನಟನೆ) ತೆರೆ ಕಂಡಿರುವುದು ಕಾಕತಾಳೀಯವೂ ಸಾಂಕೇತಿಕವೂ ಆಗಿದೆ ಎಂದು ಕಟಕಿಯಾಡಿದೆ.
”ಯಾವುದೇ ಹೊಸ ಚಿತ್ರ ಬಿಡುಗಡೆಗೆ ಸೂಕ್ತ ಮುಹೂರ್ತ ನಿಗದಿಸುವುದಕ್ಕೆ ಹೆಸರುವಾಸಿಯಾಗಿರುವ ಬಾಲಿವುಡ್ ಚಿತ್ರರಂಗ, ಥಗ್ಸ್ ಆಫ್ ಹಿಂದುಸ್ಥಾನ್ ಚಿತ್ರ ಬಿಡುಗಡೆಗೆ, ದೇಶವನ್ನು ನೋಟು ಅಮಾನ್ಯದ ಮೂಲಕ ಕೊಳ್ಳೆ ಹೊಡೆದಿರುವವರ ದುಸ್ಸಾಹಸಕ್ಕೆ ಎರಡು ವರ್ಷ ತುಂಬಿದ ದಿನದಂದೇ ಸೂಕ್ತ ಮುಹೂರ್ತವನ್ನು ಕಂಡು ಕೊಂಡಿರುವುದು ಅತ್ಯಂತ ಅಶ್ಚರ್ಯವೂ ಕಾಕತಾಳೀಯವೂ ಆಗಿದೆ” ಎಂದು ಕಾಂಗ್ರೆಸ್ ತನ್ನ “ಸಂಶೋಧನೆ”ಯಲ್ಲಿ ಹೇಳಿದೆ.