ಬಳ್ಳಾರಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆಸಿದ್ದು, ಕೇಂದ್ರ ಸರ್ಕಾರ ಕೂಡಲೇ ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ರಾಯಲ್ ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಿವಿಧ ಘೋಷಣೆ ಕೂಗಿದರು. ಬಳಿಕ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ, ಹಿರಿಯ ಮುಖಂಡ ನಾರಾ ಸೂರ್ಯನಾರಾಯಣರೆಡ್ಡಿ, ರಫೇಲ್
ಒಪ್ಪಂದದಲ್ಲಿ ರಿಲಯನ್ಸ್ ಕಂಪನಿಯನ್ನು ದೇಶೀ ಪಾಲುದಾರ ಸಂಸ್ಥೆಯನ್ನಾಗಿ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಒತ್ತಡ ಹೇರಿದೆ. ಈ ಹಗರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗಿಯಾಗಿ ಸಾವಿರಾರು ಕೋಟಿ ರೂ. ಹಣವನ್ನು ರಿಲಯನ್ಸ್ ಕಂಪನಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಕಂಪ್ಲಿ ಶಾಸಕ ಜೆ.ಎನ್.ಗಣೇಶ ಮಾತನಾಡಿ, ಈ ಹಿಂದಿನ ನಿಯಮಗಳನ್ನು ರದ್ದುಪಡಿಸಿ, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ತಯಾರು ಮಾಡಿದ ಅನುಭವ ಇರದ ರಿಲಾಯನ್ಸ್ ಕಂಪನಿಗೆ ಕೇಂದ್ರ ಸರ್ಕಾರ
ಗುತ್ತಿಗೆ ನೀಡಿರುವುದು ಬಹುದೊಡ್ಡ ದುರಂತದ ಸಂಗತಿ. ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಗುತ್ತಿಗೆ ರದ್ದು ಮಾಡಿದ ಹಿನ್ನೆಲೆಯಲ್ಲಿ 19 ಸಾವಿರಕ್ಕೂ ಹೆಚ್ಚು ಹುದ್ದೆಗಳು ಕಡಿತಗೊಂಡಿವೆ ಎಂದು ದೂರಿದರು.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ನಿರುದ್ಯೋಗ ವಿದ್ಯಾವಂತ ಎಲ್ಲ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಆದರೆ, ನೀಡಿದ ಭರವಸೆಯನ್ನು ಕೇಂದ್ರ ಸರ್ಕಾರ ಮರೆತಂತಿದೆ. ಎಲ್ಲ ಕಡೆಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವೆ, ನಿರ್ಮೂಲನೆ ಮಾಡುವೆ ಎನ್ನುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಇದೀಗ ರಫೇಲ್ ಒಪ್ಪಂದದಲ್ಲಿ ಅಕ್ರಮ ಮಾಡಿ, ತಮ್ಮ ಮುಖವಾಡ ಸಾಬೀತು ಪಡಿಸಿದ್ದಾರೆ ಎಂದು ಆರೋಪಿಸಿದರು. ನಗರ ಘಟಕದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹ್ಮದ್ ರμಕ್, ಪಾಲಿಕೆ ಸದಸ್ಯ ವೆಂಕಟರಮಣ, ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಪಾಲಿಕೆ ಸದಸ್ಯೆ ಫರ್ವೀನ್ ಬಾನು, ಜಿಪಂ ಸದಸ್ಯರಾದ ಅಲ್ಲಂ ಪ್ರಶಾಂತ್, ಎ.ಮಾನಯ್ಯ, ಕೆಪಿಸಿಸಿ ಸದಸ್ಯ ಕಲ್ಲುಕಂಬ ಪಂಪಾಪತಿ, ಮುಖಂಡರಾದ ಮಂಜುನಾಥ್ ಸೇರಿದಂತೆ ಮಹಿಳಾ ಘಟಕದ ಮುಖ್ಯಸ್ಥರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.