Advertisement

Politics: ಕಾಂಗ್ರೆಸ್‌ ಸೇರ್ಪಡೆ ಖಚಿತ: ಸುಕುಮಾರ್‌ ಶೆಟ್ಟಿ

08:41 PM Sep 29, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸೇರ್ಪಡೆ ವಿಚಾರದಲ್ಲಿ ನನ್ನ ನಿಲುವು ಅಚಲವಾಗಿದ್ದು, ಯಾವುದೇ ಕಾರಣಕ್ಕೂ ಮನಸ್ಸು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬೈಂದೂರಿನ ಮಾಜಿ ಶಾಸಕ ಸುಕುಮಾರ್‌ ಶೆಟ್ಟಿ ಹೇಳಿದ್ದಾರೆ.

Advertisement

“ಉದಯವಾಣಿ’ ಜತೆಗೆ ಮಾತನಾಡಿದ ಅವರು, ಬಿಜೆಪಿ ನಿಯೋಗ ನನ್ನನ್ನು ಭೇಟಿ ಮಾಡಿ ನಿರ್ಧಾರ ಬದಲಾಯಿಸುವಂತೆ ಮನವಿ ಮಾಡಿದ್ದು ಸತ್ಯ. ಆದರೆ ನಾನು ಕಾಂಗ್ರೆಸ್‌ ಸೇರುವ ಬಗ್ಗೆ ಈಗಾಗಲೇ ನಿರ್ಧಾರ ಮಾಡಿದ್ದೇನೆ. ಕಳೆದ ವಾರ ಸಿಎಂ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ನವೆಂಬರ್‌ ಮೊದಲ ವಾರದಲ್ಲಿ ಕಾಂಗ್ರೆಸ್‌ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಾನು ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಸುಮಾರು 3,600 ಕೋಟಿ ರೂ. ಮೊತ್ತದ ಕೆಲಸ ಮಾಡಿದ್ದೇನೆ. ಆದರೂ ಬಿಜೆಪಿ ನನಗೆ ಟಿಕೆಟ್‌ ನಿರಾಕರಿಸಿತು. ಯಾವ ಕಾರಣಕ್ಕೆ ಟಿಕೆಟ್‌ ತಪ್ಪಿಸಿದರು ಎಂದು ಇದುವರೆಗೆ ತಿಳಿಸಿಲ್ಲ. ಬೇರೆಯವರಿಗೆ ಟಿಕೆಟ್‌ ಕೊಟ್ಟರೂ ಚುನಾವಣೆ ಸಂದರ್ಭದಲ್ಲಿ ನಾನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಎಲ್ಲವನ್ನು ಸಹಿಸಿಕೊಂಡೆ. ಈಗ ಭಾರವಾದ ಹೃದಯದಿಂದ ಪಕ್ಷ ಬಿಡುತ್ತಿದ್ದೇನೆ. ರಾಜ್ಯದಲ್ಲಿ ಈಗ ಬಿಜೆಪಿಗೆ ನಾಯಕತ್ವ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸಿಗೆ ನಾನೇನು ಹೊಸಬನಲ್ಲ. ನನ್ನ ಆತ್ಮೀಯ ಸ್ನೇಹಿತರಾಗಿದ್ದ ಜಿ.ಎಸ್‌.ಆಚಾರ್‌ ಅವರು ನಿಧನ ಹೊಂದಿದಾಗ 1994ರಲ್ಲೇ ಕಾಂಗ್ರೆಸ್‌ ಟಿಕೆಟ್‌ ಒಲಿದು ಬಂದಿತ್ತು. ಆಗ ಶೃಂಗೇರಿ ಸ್ವಾಮೀಜಿಗಳು, ರಾಜಕೀಯ ಬೇಡ. ಸಾಮಾಜಿಕ ಸೇವೆಯಲ್ಲಿ ಇನ್ನಷ್ಟು ಮುಂದುವರಿಯಲು ನೀಡಿದ ಸಲಹೆಯಂತೆ ತಟಸ್ಥನಾಗಿ ಉಳಿದೆ. 2013ರಲ್ಲಿ ಸಂಘ-ಪರಿವಾರದ ಹಿರಿಯರು ಒತ್ತಾಯಿಸಿದ್ದರಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತೆ. 2018ರ ಚುನಾವಣೆಯಲ್ಲಿ ಗೆದ್ದು ಬಂದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ದಾಖಲೆಯ 75 ಸಾವಿರ ಮತಗಳ ಮುನ್ನಡೆ ಸಿಗಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ. ಆದರೆ ಸೂಕ್ತ ಕಾರಣವನ್ನೇ ನೀಡದೆ ಪಕ್ಷ ಟಿಕೆಟ್‌ ನಿರಾಕರಿಸಿತು ಎಂದು ಬೇಸರ ವ್ಯಕ್ತಪಡಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next