ತುಮಕೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಅದರಂತೆ ನಡೆದುಕೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಗ್ಯಾರಂಟಿಯಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಘೋಷಣೆ ಮಾಡಲಾಗಿತ್ತು. ಈ ಬಗ್ಗೆ ಅನೇಕ ಟೀಕೆ ಟಿಪ್ಪಣಿ ವಿರೋಧ ಪಕ್ಷಗಳು ಮಾಡಿದ್ದವು. ಅವರು ಕೊಡುವುದಿಲ್ಲ, ಸುಮ್ಮನೆ ಹೇಳುತ್ತಾರೆಂದು ಜನರ ತಪ್ಪು ದಾರಿಗೆ ಕರೆದೊಯ್ಯುವ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇವೆ ಎಂದು ಹೇಳಿದರು.
ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಅಧಿಕಾರ ಕೊಟ್ಟಿದ್ದಾರೆ. ಬುಧವಾರ ಮೈಸೂರಿನಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮ ಉದ್ಘಾಟನೆ ಆಗಲಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡಲಿದ್ದೇವೆ ಎಂದು ಹೇಳಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಶೇ.40 ಕಮಿಷನ್ ಆರೋಪದಿಂದ ಅವರು ಇನ್ನೂ ಹೊರಗೆ ಬಂದಿಲ್ಲ. ಬೊಮ್ಮಾಯಿಯವರು ಅದೇ ಮೈಂಡ್ ಸೆಟ್‌ನಲ್ಲಿದ್ದಾರೆ. ಕರ್ನಾಟಕದ ಜನರಿಗೆ ಒಳ್ಳೆಯ ಆಡಳಿತ ನೀಡುತ್ತೇವೆ ಅಂತಾ ಹೇಳಿದ್ದೇವೆ, ನೀಡುತ್ತೇವೆ. ಜನಪ್ರಿಯ ಯೋಜನೆ ಜಾರಿಗೆ ತಂದಿರುವ ಕಾರಣ ಅಭಿವೃದ್ಧಿ ಸ್ವಲ್ಪ ಹಿಂದೆ ಇರಬಹುದು. ಮುಂದಿನ ದಿನಗಳಲ್ಲಿ ವೇಗ ಆಗಲಿದೆ. 36 ಸಾವಿರ ಕೋಟಿ ರೂ. ಖರ್ಚು ಮಾಡಲು ಶುರುಮಾಡಿದ್ದೇವೆ. ಮಾನ್ಯ ಬೊಮ್ಮಾಯಿ ಭ್ರಷ್ಟಾಚಾರ..ಭ್ರಷ್ಟಾಚಾರ ಅನ್ನೋದು ಬಹಳ ಬೇಗ ಮರೆತರೆ ಒಳ್ಳೆಯದು ಎಂದು ನುಡಿದರು.
ಆಪರೇಷನ್ ಹಸ್ತದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ತುಮಕೂರಿನಲ್ಲೂ ಕಾಂಗ್ರೆಸ್ ನತ್ತ ಬಿಜೆಪಿ, ಜೆಡಿಎಸ್ ಹಾಲಿ ಹಾಗೂ ಮಾಜಿ ಶಾಸಕರ ಚಿತ್ತ ಇದೆ ಎಂದು ನುಡಿದರು.