ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿ.ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.
ನೂರಾರು ಮಂದಿ ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದ ಮುಖಂಡ ಮಲ್ಲೇಶ್ ಅವರೊಂದಿಗೆ ಗಾಂಧಿನಗರ ಕ್ಷೇತ್ರದಲ್ಲಿ ಭಾನುವಾರ ಬಿರುಸಿನ ಪ್ರಚಾರ ನಡೆಸಿದ ಅವರು ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಗಾಂಧಿನಗರ ಕ್ಷೇತ್ರದ ಕೊಳಗೇರಿ ಪ್ರದೇಶಗಳ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪ್ರಾಣಿಗಳು ಸಹ ವಾಸ ಮಾಡಲಾರದಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಕ್ಷೇತ್ರ ಮರುವಿಂಗಡಣೆ ನಂತರ ಕಳೆದ ಎರಡು ಬಾರಿ ಕಾಂಗ್ರೆಸ್ ಪಕ್ಷದ ಶಾಸಕರೇ ಇಲ್ಲಿ ಆಯ್ಕೆಯಾಗಿದ್ದು, ಕೊಳಗೇರಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳದೆ ಇರುವುದರಿಂದ ಈ ಭಾಗದ ಜನರು ಅತ್ಯಂತ ಕನಿಷ್ಠ ಮಟ್ಟದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಳೆಗೇರಿಯ ಮಕ್ಕಳು, ಹಿರಿಯ ನಾಗರಿಕರು ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಸದಾಕಾಲ ತೊಂದರೆ ಅನುಭವಿಸುವಂತಾಗಿದೆ. ಸರಿಯಾಗಿ ಒಳಚರಂಡಿ ಸೌಲಭ್ಯ ಇಲ್ಲದೆ ಇರುವುದರಿಂದ ಕೊಳಚೆ ನೀರು ಜನರು ಮತ್ತು ಮಕ್ಕಳು ಓಡಾಡುವ ಪ್ರದೇಶದಲ್ಲಿ ಹರಿಯುತ್ತಿದ್ದು ಇದು ಮಾರಕ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಅಪಾಯಕಾರಿ ಸೊಳ್ಳೆ ಕಡಿತದಿಂದ ಕೊಳಗೇರಿ ಪ್ರದೇಶದ ನಿವಾಸಿಗಳು ಡೆಂ ಹಾಗೂ ವಿವಿಧ ಜ್ವರದಿಂದ ಸಂಕಟ ಅನುಭವಿಸುವಂತಾಗಿದೆ ಎಂದು ಕೊಳಗೇರಿ ಪ್ರದೇಶದ ಚಿತ್ರಣವನ್ನು ಬಿಚ್ಚಿಟ್ಟ ಅವರು, ಈ ಭಾಗಗಳಲ್ಲಿ ಕುಡಿಯುವ ನೀರಿಗೆ ಕೊಳಚೆ ನೀರು ಆಗಾಗೆ ಮಿಶ್ರಣವಾಗುವುದರಿಂದ ಜನ ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ತಮ್ಮನ್ನು ಆಯ್ಕೆ ಮಾಡಿದರೆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.