Advertisement

ಅಧಿವೇಶನ ಬಳಿಕ ನೇಮಕ

06:00 AM Jul 09, 2018 | Team Udayavani |

ಬೆಂಗಳೂರು: ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.

Advertisement

ನಿಗಮ-ಮಂಡಳಿಗಳಿಗೆ ನೇಮಕ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಗ್ರೀನ್‌ಸಿಗ್ನಲ್‌ ನೀಡಿದ್ದು ಮೊದಲ ಹಂತದಲ್ಲಿ 30 ಸ್ಥಾನಗಳ ಭರ್ತಿಯಾಗಲಿದೆ. ಕಾಂಗ್ರೆಸ್‌ಗೆ 20 ಹಾಗೂ ಜೆಡಿಎಸ್‌ಗೆ 10 ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷಗಿರಿ ಸಿಗಲಿದ್ದು, ಬಹುತೇಕ ಸಚಿವ ಸ್ಥಾನದಿಂದ ವಂಚಿತರಾದವರಿಗೆ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಸಚಿವರ ಖಾತೆಗಳ ವ್ಯಾಪ್ತಿಯ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ಕಾಂಗ್ರೆಸ್‌ಗೆ, ಜೆಡಿಎಸ್‌ ಸಚಿವರ ಇಲಾಖೆಗಳ ವ್ಯಾಪ್ತಿಯ ನಿಗಮ-ಮಂಡಳಿಗಳು ಜೆಡಿಎಸ್‌ಗೆ ಎಂಬ ಒಪ್ಪಂದವಾಗಿದೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಇಂತದ್ದೇ ನಿಗಮ-ಮಂಡಳಿ ಬೇಕೆಂದು ಕೆಲವರು ಪಟ್ಟು ಹಿಡಿದಿದ್ದು ಆ ಲೆಕ್ಕಾಚಾರದಡಿ ಹಂಚಿಕೆ ಕಷ್ಟವಾಗಬಹುದು. ಹೀಗಾಗಿ, ಈ ವಿಚಾರ ಸಮನ್ವಯ ಸಮಿತಿಯಲ್ಲೇ ತೀರ್ಮಾನವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಡಾ.ಜಿ.ಪರಮೇಶ್ವರ್‌ ದೆಹಲಿ ಭೇಟಿ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜತೆ ಮಾತನಾಡಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪ್ರಸ್ತಾಪ ಮಾಡಿದ್ದು, ನಿಗಮ-ಮಂಡಳಿ ನೇಮಕಕ್ಕೆ ಒಪ್ಪಿಗೆ ಪಡೆದಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಬಿ.ಸಿ.ಪಾಟೀಲ್‌, ಎಂ.ಟಿ.ಬಿ.ನಾಗರಾಜ್‌, ರಹೀಂಖಾನ್‌, ಶಿವಳ್ಳಿ,ಡಾ.ಸುಧಾಕರ್‌ ಅವರಿಗೆ ನಿಗಮ ಮಂಡಳಿ ಆಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ಚರ್ಚೆ ನಡೆದಿದೆ. ಜತೆಗೆ, ಎರಡು ಬಾರಿ ಆಯ್ಕೆಯಾದವರನ್ನು ನಿಗಮ-ಮಂಡಳಿಗಳ ಅಧ್ಯಕ್ಷಗಿರಿಗೆ ಪರಿಗಣಿಸಲುತೀರ್ಮಾನಿಸಲಾಗಿದ್ದು, ಎಸ್‌.ಟಿ.ಸೋಮಶೇಖರ್‌,ಬೈರತಿ ಬಸವರಾಜ್‌, ಮುನಿರತ್ನ ಹಾಗೂ ಎನ್‌.ಎ.ಹ್ಯಾರೀಸ್‌ ಅವರ ಹೆಸರು ಕೇಳಿಬರುತ್ತಿದೆ.

Advertisement

ಜೆಡಿಎಸ್‌ನಲ್ಲಿ ಶಿವಲಿಂಗೇಗೌಡ, ರವೀಂದ್ರ ಶ್ರೀಕಂಠಯ್ಯ, ಮಂಜು, ಸುರೇಶ್‌ಗೌಡ, ವೀರಭದ್ರಯ್ಯ ಹೆಸರು ಕೇಳಿಬರುತ್ತಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಕೋನರೆಡ್ಡಿ, ಸುರೇಶ್‌ ಬಾಬು, ಮಧುಬಂಗಾರಪ್ಪ, ರಮೇಶ್‌ಬಾಬು ಅವರಿಗೂ ಅವಕಾಶ ಕಲ್ಪಿಸಬೇಕೆಂಬ ಅಭಿಪ್ರಾಯವೂ ಇದೆ.

ಮಧುಬಂಗಾರಪ್ಪ, ಸುರೇಶ್‌ಬಾಬು ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ
ನೇಮಿಸುವ ಬಗ್ಗೆಯೂ ಚಿಂತನೆಯಿದೆ ಎಂದು ಮೂಲಗಳು ತಿಳಿಸಿವೆ.

ಬಿಡಿಎ ಮೇಲೆ ಕಣ್ಣು: ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ಬಿಡಿಎ ಅಧ್ಯಕ್ಷಗಿರಿ ಪಡೆಯಲು ಹಲವು ಶಾಸಕರು ಪೈಪೋಟಿ ನಡೆಸುತ್ತಿದ್ದು, ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್‌ ಹಾಗೂ ಹೆಬ್ಟಾಳದ ಬೈರತಿ ಸುರೇಶ್‌ ಪ್ರಬಲ ಆಕಾಂಕ್ಷಿಗಳು ಎಂದು ಹೇಳಲಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿರುವ ಬೈರತಿ ಸುರೇಶ್‌ ಬಿಡಿಎ ಅಧ್ಯಕ್ಷ ಸ್ಥಾನ ಪಡೆಯಲು ಲಾಬಿ ನಡೆಸಿದ್ದಾರೆಂದು ಹೇಳಲಾಗಿದೆ.

ಸಂಪುಟ ವಿಸ್ತರಣೆಗೂ ಸಮ್ಮತಿ
ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ತುಂಬಿ ಸಚಿವ ಸ್ಥಾನ ವಂಚಿತರಿಗೆ ಹುದ್ದೆ ಕಲ್ಪಿಸಿ ಸಮಾಧಾನಪಡಿಸಿದ ನಂತರ ಸಂಪುಟ ವಿಸ್ತರಣೆಯೂ ನಡೆಯಲಿದೆ. ಅದಕ್ಕೂ ರಾಹುಲ್‌ಗಾಂಧಿ ಒಪ್ಪಿಗೆ ನೀಡಿದ್ದಾರೆ. ಪರಮೇಶ್ವರ್‌, ದಿನೇಶ್‌ಗುಂಡೂರಾವ್‌, ಸಿದ್ದರಾಮಯ್ಯ ಸೇರಿ ಸಂಪುಟ ಸೇರುವವರ ಪಟ್ಟಿ ಸಿದಟಛಿಪಡಿಸಿ ನಂತರ ಹೈಕಮಾಂಡ್‌ ಒಪ್ಪಿಗೆ ಪಡೆಯಲು ನಿರ್ದೇಶನ ನೀಡಲಾಗಿದೆ ಎನ್ನಲಾಗಿದೆ. 

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಕೋಟಾ 6, ಜೆಡಿಎಸ್‌ ಕೋಟಾದ ಒಂದು ಸಚಿವ ಸ್ಥಾನ ಭರ್ತಿಯಾಗಬೇಕಿದೆ. ಕಾಂಗ್ರೆಸ್‌ನಲ್ಲಿ ಎಂ.ಬಿ.ಪಾಟೀಲ್‌, ಎಚ್‌.ಕೆ.ಪಾಟೀಲ್‌, ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್‌, ಎಂ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌, ತನ್ವೀರ್‌ ಸೇs…, ರಹೀಂಖಾನ್‌, ಎಂ.ಟಿ.ಬಿ.ನಾಗರಾಜ್‌, ಸಿ.ಎಸ್‌.ಶಿವಳ್ಳಿ, ರೂಪಾ ಶಶಿಧರ್‌ ಪ್ರಬಲ ಸಚಿವಾಕಾಂಕ್ಷಿಗಳಾಗಿದ್ದಾರೆ.

ವಿಧಾನಪರಿಷತ್‌ನಿಂದಲೂ ಎಸ್‌.ಆರ್‌.ಪಾಟೀಲ್‌, ಎಚ್‌.ಎಂ.ರೇವಣ್ಣ, ಧರ್ಮಸೇನಾ ಅವರು ಸಚಿವರಾಗಲು ಲಾಬಿ ನಡೆಸುತ್ತಿದ್ದಾರೆ. ಜೆಡಿಎಸ್‌ನಲ್ಲಿ ಒಂದೇ ಸ್ಥಾನ ಇರುವುದರಿಂದ ಶಿರಾ ಸತ್ಯನಾರಾಯಣ, ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ಕೆ.ಶ್ರೀನಿವಾಸಗೌಡ, ಎ.ಟಿ.ರಾಮಸ್ವಾಮಿ, ಎಚ್‌.ವಿಶ್ವನಾಥ್‌, ಎಚ್‌.ಕೆ.ಕುಮಾರಸ್ವಾಮಿ, ಟಿ.ಎ.ಶರವಣ ಆಕಾಂಕ್ಷಿಗಳಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next