ನವದೆಹಲಿ/ತಿರುವನಂತಪುರ: ರಾಜ್ಯಗಳ ಮಟ್ಟದಲ್ಲಿ ತನ್ನೆಲ್ಲಾ ಹಳೆಯ ನಾಯಕರನ್ನು ಅಥವಾ ಚಲಾವಣೆಯಲ್ಲಿ ಇರದ ನಾಯಕರನ್ನು ನಿಧಾನವಾಗಿ ಬದಿಗೊತ್ತಿ, ಅವರ ಜಾಗಕ್ಕೆ ಪಕ್ಷಕ್ಕೆ ಚುನಾವಣೆಗಳಲ್ಲಿ ಆಸರೆಯಾಗುವಂಥ ಯುವ ನಾಯಕರನ್ನು ಬೆಳೆಸುವ ಹೊಸ ಕೈಂಕರ್ಯಕ್ಕೆ ಕಾಂಗ್ರೆಸ್ ಪಕ್ಷ, ತಡವಾಗಿಯಾದರೂ ಚಾಲನೆ ನೀಡಿದೆ. ಇದು, ಕೇರಳ ಕಾಂಗ್ರೆಸ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ತೆರೆಮರೆಯಲ್ಲಿ ನಿಂತು ತನ್ನ ಉದ್ದೇಶವನ್ನು ಈಡೇರಿಸಲು ನಿರ್ಧರಿಸುವ ಕಾಂಗ್ರೆಸ್ ಹೈಕಮಾಂಡ್, ಕೇರಳ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಖಡಕ್ ರಾಜಕಾರಣಿ ಕೆ. ಸುಧಾಕರನ್ ಅವರನ್ನು ತಂದು ಕೂರಿಸಿದೆ. ಅವರ ಬಿರುಸಿನ ನಿರ್ಧಾರಗಳಿಂದಾಗಿ ಕೇರಳ ಕಾಂಗ್ರೆಸ್‌ನ ಹಳೆಯ ಹುಲಿಗಳಾದ ಉಮನ್ ಚಾಂಡಿ, ರಮೇಶ್ ಚೆನ್ನಿತ್ತಾಲ, ವಿ.ಎಂ. ಸುಧೀರನ್, ಎಂ. ರಾಮಚಂದ್ರನ್‌ನಂಥವರೇ ನಲುಗಿದ್ದಾರೆ.
ಇದನ್ನೂ ಓದಿ:ಕೋವಿಡ್ ಬದಲು ರೇಬೀಸ್ ಲಸಿಕೆ; ಡಾಕ್ಟರ್, ನರ್ಸ್ ಅಮಾನತು
ಹೈಕಮಾಂಡ್ ನಿರ್ಲಿಪ್ತ: ದಿಲ್ಲಿಯ ಹೈಕಮಾಂಡ್‌ಗೂ ಸುಧಾಕರನ್ ವಿರುದ್ಧ ದೂರುಗಳು ಹೋಗಿವೆ. ಆದರೆ, ಹೈಕಮಾಂಡ್ ಮಾತ್ರ, ನಿಮ್ಮ ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳಿ ಎಂದು ಹೇಳಿ ತಣ್ಣಗೆ ಕುಳಿತಿದೆ. ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎಂದು ಹಳೆಯ ನಾಯಕರಿಗೆ ಸ್ಪಷ್ಟವಾಗಿ ಹೇಳಿದೆ. ಒಟ್ಟಿನಲ್ಲಿ ತನ್ನ ಉದ್ದೇಶ ಈಡೇರುತ್ತಿರುವುದರಿಂದ ಅದು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.