Advertisement
ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಚಿಂತನ ಶಿಬಿರದಲ್ಲಿ ರಾಜ್ಯದ ವಿಧಾನಸಭೆ ಚುನಾವಣೆ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿ ರವಿವಾರ ಚರ್ಚೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿಯವರ ಸಮ್ಮುಖದಲ್ಲೇ ವಿಸ್ತೃತವಾಗಿ ಚರ್ಚೆ ನಡೆಯಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜೂನ್ ಎರಡನೇ ವಾರದಲ್ಲಿ ದಿಲ್ಲಿಗೆ ಬರುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೇಳಲಾಗಿದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ನಡುವಿನ ಟ್ವೀಟ್ ಸಮರಕ್ಕೆ ಇತಿಶ್ರೀ ಹಾಡಿರುವ ಹೈಕಮಾಂಡ್ ನಾಯಕರು ಇಬ್ಬರ ನಡುವೆ ರಾಜಿ-ಸಂಧಾನ ಏರ್ಪಡಿಸಿದ್ದಾರೆ. ಜೊತೆಗೆ, ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋಗಬೇಕು. ಯಾವುದೇ ಕಾರಣಕ್ಕೂ ಬಿಜೆಪಿ ಸಹಿತ ಅನ್ಯ ಪಕ್ಷದವರಿಗೆ ಆಹಾರ ಒದಗಿಸಬಾರದು ಎಂದು ರಾಜ್ಯ ನಾಯಕರಿಗೆ ಹೈಕಮಾಂಡ್ ಕಟ್ಟು ನಿಟ್ಟಿನ ತಾಕೀತುನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಮಾಹಿತಿ ಪಡೆದ ಹೈಕಮಾಂಡ್
ಈ ಮಧ್ಯೆ ಚಿಂತನ ಶಿಬಿರದಲ್ಲಿ ಕಳೆದ ಮೂರು ದಿನಗಳಲ್ಲಿ ರಾಜ್ಯದ ವಿದ್ಯಾಮಾನಗಳ ಬಗ್ಗೆ ಹೈಕಮಾಂಡ್‌ಗೆ ರಾಜ್ಯ ನಾಯಕರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಪಿಎಸ್‌ಐ ನೇಮಕಾತಿ ಹಗರಣ ಸೇರಿ ಬಿಜೆಪಿ ಸರಕಾರದ ಭ್ರಷ್ಟಾಚಾರದ ಜತೆಗೆ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ ಬಗ್ಗೆಯೂ ಮಾಹಿತಿಯನ್ನು ಹೈಕಮಾಂಡ್ ಪಡೆದುಕೊಂಡಿದೆ ಎನ್ನಲಾಗಿದೆ.