Advertisement

ಏ.8ರಂದು ಬೆಂಗಳೂರಿನಲ್ಲಿ ಕೈ ಬಲ ಪ್ರದರ್ಶನ

06:25 AM Apr 01, 2018 | Team Udayavani |

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್‌ ಮುಂದಾಗಿದ್ದು, ಏ.8 ರಂದು ರಾಹುಲ್‌ಗಾಂಧಿಯವರ ಜನಾಶೀರ್ವಾದ ಯಾತ್ರೆ ಸಮಾರೋಪ ಸಮಾವೇಶ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದೆ.

Advertisement

ಸಮಾವೇಶಕ್ಕೆ ಸುಮಾರು ಐದು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು, ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ.

ಜನಾಶೀರ್ವಾದ ಯಾತ್ರೆಯ ಸಮಾರೋಪದ ನಂತರ ದೆಹಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹೀಗಾಗಿ, ಆಕಾಂಕ್ಷಿಗಳಿಗೆ ಸಮಾವೇಶಕ್ಕೆ ಹೆಚ್ಚಿನ ಜನ ಸೇರಿಸುವ “ಟಾರ್ಗೆಟ್‌’ ನೀಡಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಏ.8ರಂದು ‌ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಭಾಗವಹಿಸಲಿದ್ದಾರೆ. ಇದು ಜನಾಶೀರ್ವಾದ ಯಾತ್ರೆಯ ಸಮಾರೋಪವೂ ಹೌದು ಎಂದು ಹೇಳಿದರು.

ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭವಾಗಲಿದ್ದು ಸುಮಾರು ಐದು ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಸಮಾವೇಶದ ನಂತರ ಬೆಂಗಳೂರಿನ ಹಲವು ಮುಖಂಡರು, ಮಾಧ್ಯಮ ಪ್ರಮುಖರು, ಉದ್ಯಮಿಗಳ ಜತೆ ರಾಹುಲ್‌ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.

Advertisement

ಸಮಾವೇಶದ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪಾಲಿಕೆ ಸದಸ್ಯರಿಗೆ ವಹಿಸಲಾಗಿದೆ. ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ ಎಂದು ಹೇಳಿದರು.

ರಾಹುಲ್‌ ಗಾಂಧಿಯವರ ನಾಲ್ಕನೇ ಹಂತದ ರಾಜ್ಯ ಪ್ರವಾಸ ಏ.3ರಿಂದ ಆರಂಭವಾಗಲಿದ್ದು ಬೆಂಗಳೂರು ವಿಭಾಗದ 79 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಏ.3ರಂದು ದೆಹಲಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಬಂದು ರೋಡ್‌ ಶೋ ನಡೆಸಲಿದ್ದಾರೆ. ಹೊನ್ನಾಳಿ. ಹರಿಹರದಲ್ಲೂ ರೋಡ್‌ಶೋ ಆಯೋಜಿಸಿದ್ದೇವೆ. ದಾವಣಗೆರೆಯಲ್ಲಿ ಕಾರ್ಯಕರ್ತರ ಬೃಹತ್‌ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಏ.4ರಂದು  ಜಿಲ್ಲಾ ಮುಖಂಡರ ಜತೆ ಸಭೆ, ನಂತರ ಹೊಳಲ್ಕೆರೆಯಲ್ಲಿ ಸಾರ್ವಜನಿಕ ಸಭೆ, ತುಮಕೂರಿನಲ್ಲಿ ರೋಡ್‌ ಶೋ ಮುಗಿಸಿ, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆಯಲಿದ್ದಾರೆ. ಇದಾದ ನಂತರ ಕುಣಿಗಲ್‌ನಲ್ಲಿ ರೋಡ್‌ ಶೋ, ಮಾಗಡಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ಎಂ.ಆರ್‌.ಸೀತಾರಾಂ ಉಪಸ್ಥಿತರಿದ್ದರು.

ಆರೋಪಿತರು ಕಾಂಗ್ರೆಸ್‌ ಸೇರುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಜಿ. ಪರಮೇಶ್ವರ್‌,  ಕಾಂಗ್ರೆಸ್‌ ಪಕ್ಷ ಸೇರಿಕೊಳ್ಳುತ್ತಿರುವವರ ಮೇಲೆ ಆರೋಪಗಳಿರಬಹುದು. ಆದರೆ, ಕಾನೂನು ಚೌಕಟ್ಟಿನಲ್ಲಿ ಅವರ ಮೇಲೆ ಕ್ರಮವಾದರೆ ರಕ್ಷಿಸುವ ಉದ್ದೇಶ ಪಕ್ಷಕ್ಕಿಲ್ಲ.  ನಾಳೆಯೇ ನ್ಯಾಯಾಲಯ ಅವರ ವಿರುದ್ಧ ಕ್ರಮ ಕೈಗೊಂಡರೂ ಪಕ್ಷ ಅವರ ಪರ ನಿಲ್ಲುವುದಿಲ್ಲ. ಆದರೆ ಆರೋಪ ಇರುವವರು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುತ್ತಾರೆ ಎಂದು ಸಮರ್ಥಿಸಿಕೊಂಡರು.

ಸಮಾಲೋಚನಾ ಸಭೆ:
ಏ.8ಕ್ಕೆ ರಾಹುಲ್‌ ಗಾಂಧಿಯವರು ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಶನಿವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿದರು. ಸಮಾವೇಶದ ಉಸ್ತುವಾರಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ಬೆಂಗಳೂರು ನಗರ ವ್ಯಾಪ್ತಿಯ ಸಚಿವರಿಗೆ, ಶಾಸಕರಿಗೆ, ಪಾಲಿಕೆ ಸದಸ್ಯರಿಗೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಸೂಚನೆ ನೀಡಿದರು.

ರಾಹುಲ್‌ ಸರದಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ಸಹ ಸಿದ್ಧಗಂಗಾ ಮಠ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ನಾಲ್ಕನೇ ಹಮತದಲ್ಲಿ ರಾಹುಲ್‌ ಗಾಂಧಿಯವರ ಬೆಂಗಳೂರು ವಿಭಾಗದ ಪ್ರವಾಸ ಏ.3ರಿಂದ ಆರಂಭವಾಗಲಿದ್ದು, ಏ.4 ರಂದು ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next