Advertisement

ಮಂಡಲ ಪಂಚಾಯತ್‌ ವ್ಯವಸ್ಥೆ ಸಂಪೂರ್ಣ ಹಾಳು ಮಾಡಿದ್ದೇ ಕಾಂಗ್ರೆಸ್‌; ಕಾರಜೋಳ

05:28 PM Jan 13, 2021 | Nagendra Trasi |

ವಿಜಯಪುರ: ಗಾಂಧಿಧೀಜಿ ಅವರ ರಾಮರಾಜ್ಯದ ಗ್ರಾಮೀಣ ಅಭ್ಯುದಯದ ಕನಸಿನೊಂದಿಗೆ ರಾಮಕೃಷ್ಣ ಹೆಗಡೆ ಅವರಿಂದ ಕರ್ನಾಟಕದಲ್ಲಿ 1983ರಲ್ಲಿ ಮಂಡಲ ಪಂಚಾಯತ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕಾಂಗ್ರೆಸ್‌ ಈ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದ್ದರಿಂದ ಗಾಂಧೀಜಿ ಕನಸು ಸಾಕಾರಗೊಳ್ಳುವಲ್ಲಿ ಹಿನ್ನಡೆ ಆಯ್ತು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಾಗ್ಧಾಳಿ ನಡೆಸಿದರು.

Advertisement

ಮಂಗಳವಾರ ನಗರದ ದರ್ಬಾರ್‌ ಹೈಸ್ಕೂಲ್‌ ಮೈದಾನದಲ್ಲಿ ತನ್ನ ಪಕ್ಷದ ಬೆಂಬಲಿತರು ಗ್ರಾಪಂ ಆಯ್ಕೆಯಾಗಿರುವ ಸದಸ್ಯರಿಗೆ ಹಮ್ಮಿಕೊಂಡಿದ್ದ ಜನಸೇವಕ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಡಲ ಪಂಚಾಯತ್‌ಗೆ ಆಯ್ಕೆಯಾಗಿ ಮಾದರಿ ಸೇವೆ ನಡೆಸಿದ ಹಲವರು ನಂತರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರೂ ಆಗಿದ್ದರು. ಆದರೆ ಕಾಂಗ್ರೆಸ್‌ ಕಾಲದಲ್ಲಿ ಪಂಚಾಯತ್‌ ವ್ಯವಸ್ಥೆ ಸಂಪೂರ್ಣ ದುರ್ಬಲಗೊಂಡಿತು. ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಮತ್ತೆ ಸಬಲೀಕರಣ ಮಾಡಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗ್ರಾಪಂಗೆ ಹೆಚ್ಚಿನ ಅ ಕಾರ ಹಾಗೂ ಅನುದಾನ ನೀಡಲು ಮುಂದಾಗಿದೆ ಎಂದರು.

ರಾಜೀವ್‌ ಗಾಂಧಿ  ಪ್ರಧಾನಿ ಆಗಿದ್ದಾಗ ನವದೆಹಲಿಯಲ್ಲಿ 1 ರೂ. ಅನುದಾನ ಬಿಡುಗಡೆಯಾದರೆ ಹಳ್ಳಿಗೆ ಬರುಷ್ಟರದಲ್ಲಿ 15 ಪೈಸೆಗೆ ಕುಸಿದಿರುತ್ತದೆ ಎಂದು ಹೇಳಿದ ಮಾತು ಕಾಂಗ್ರೆಸ್‌ ಸರ್ಕಾರದಲ್ಲಿ ಹದಗೆಟ್ಟಿದ್ದ ಆಡಳಿತಕ್ಕೆ ಹಿಡಿದ ಕನ್ನಡಿ. ಆದರೆ ಈ ದುರವಸ್ಥೆಗೆ ಕಡಿವಾಣ ಹಾಕಲು ಮುಂದಾದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹಳ್ಳಿಗೆ ದೆಹಲಿಯಿಂದ ಬಿಡುಗಡೆ ಆಗುವ ಒಂದೊಂದು ರೂಪಾಯಿ ಯಥಾವತ್ತಾಗಿ ಆಯಾ ಗ್ರಾಮಕ್ಕೆ ತಲುಪುವ ವ್ಯವಸ್ಥೆ ಆಗಿದೆ. ಸರ್ಕಾರ ಬಡವರಿಗೆ ರೂಪಿಸುವ ಯಾವುದೇ ಯೋಜನೆಯ ಪ್ರತಿಫಲ ನೇರವಾಗಿ ಫಲಾನುಭವಿ ಬ್ಯಾಂಕ್‌ ಖಾತೆಗೆ ಸೇರುವಂತೆ ಪಾರದರ್ಶಕ ಆಡಳಿತ
ವ್ಯವಸ್ಥೆ ಜಾರಿಗೆ ತಂದಿರುವುದು ಹಳ್ಳಿಗಳ ಅಭಿವೃದ್ಧಿಗೂ ನೆರವಾಗಿದೆ ಎಂದರು.

ಇದಲ್ಲದೇ ಗ್ರಾಪಂಗೆ ಹೆಚ್ಚಿನ ಅನುದಾನ ನೀಡಿ, ಅದನ್ನು ತಮ್ಮ ಹಳ್ಳಿಯ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಿ ಬಳಸುವ ಅಧಿಕಾರವನ್ನು ಗ್ರಾಪಂ ಸದಸ್ಯರಾದ ನಿಮಗೆ ನೀಡುವ ಮೂಲಕ ಗ್ರಾಮೀಣ ಸ್ಥಳೀಯ ಆಡಳಿತ ಬಲವರ್ಧನೆಗೆ ಆದ್ಯತೆ ನೀಡಿದ್ದಾರೆ. ಪರಿಣಾಮ ನಿಮ್ಮ ಹಳ್ಳಿಗಳ ರಸ್ತೆ, ಶೌಚಾಲಯ, ಕೆರೆಗಳ ನಿರ್ಮಾಣ, ಅಂತರ್ಜಲ ಹೆಚ್ಚಳಕ್ಕೆ ಮಳೆ ನೀರು ಕೊಯ್ಲು, ಹೀಗೆ ಹಳ್ಳಿಗಳ ಅಭ್ಯುದಕ್ಕೆ ಅಗತ್ಯ ಇರುವ ಯೋಜನೆಗಳನ್ನು ನೀವೆ ರೂಪಿಸಿ, ನೀವೆ ಅನುಷ್ಠಾನಕ್ಕೆ ತರುವ ಹೊಣೆ ನಿಮ್ಮ ಮೇಲಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಗ್ರಾಮೀಣ ಜನರ ವಿಶ್ವಾಸ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

Advertisement

ಮಂತ್ರಿಗಳಿಗೆ ಇಲ್ಲದ ಅಧಿಕಾರ ಗ್ರಾಪಂ ಅಧ್ಯಕ್ಷರಿಗೆ ಇದೆ. ಯಾವುದೇ ಸಚಿವನಿಗೆ ತನ್ನ ಇಲಾಖೆಯ ಅನುದಾನ ಬಿಡುಗಡೆ ಚೆಕ್‌ಗೆ ಸಹಿ ಮಾಡುವ ಅ ಧಿಕಾರ ಇರುವುದಿಲ್ಲ. ಆದರೆ ಗ್ರಾಪಂ ಅಧ್ಯಕ್ಷರಿಗೆ ತನ್ನ ಗ್ರಾಮದ ಅಭಿವೃದ್ಧಿಗೆ ಹಣ ಬಳಕೆಗೆ ತಾನೇ ಅನುದಾನ ಬಳಕೆಯ ಚೆಕ್  ಗೆ ಸಹಿ ಮಾಡುವ ಅಧಿಕಾರವಿದೆ. ಅನುದಾನ ಬಳಕೆಯ ಖಜಾನೆ ಹಾಗೂ ಅಧಿಕಾರ ನಿಮ್ಮ ಬಳಿ ಇರುವುದರಿಂದ ಸದ್ಬಳಕೆ ಮಾಡಿಕೊಳ್ಳಿ. ಆ ಮೂಲಕ ಮಾದರಿ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಿ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮಾತನಾಡಿದರು. ಬಿಜೆಪಿ ಹಿರಿಯ ಮುಖಂಡ ತುಳಸಿ ಮುನಿರಾಜುಗೌಡ, ಸಂಸದ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌. ಕೆ. ಬೆಳ್ಳುಬ್ಬಿ, ಕರ್ನಾಟಕ ಸಾವಯವ ಬೀಜ ಪ್ರಮಾಣೀಕೃತ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಶಾಸಕ ರಮೇಶ ಭೂಸನೂರ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ದಯಾಸಾಗರ ಪಾಟೀಲ, ಗೂಳಪ್ಪ ಶೆಟಗಾರ ವೇದಿಕೆಯಲ್ಲಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಪ್ರಾಸ್ತಾವಿಕ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next