Advertisement

ಸಾಲದ ಹೊರೆ ಹೇರಿದ್ದೇ ಕಾಂಗ್ರೆಸ್‌ ಸಾಧನೆ

06:30 AM Mar 17, 2018 | |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಂಪೂರ್ಣ ಹದಗೆಡಿಸಿದ್ದು, ಪ್ರತಿಯೊಬ್ಬ ಕನ್ನಡಿಗನ ಮೇಲೆ 46 ಸಾವಿರ ರೂ. ಸಾಲದ ಹೊರೆ ಹೊರಿಸುವ ಪರಿಸ್ಥಿತಿಗೆ ತಂದೊಡ್ಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

Advertisement

ಶುಕ್ರವಾರ ಬ್ರೇಕಿಂಗ್‌ ನ್ಯೂಸ್‌ ನೀಡುವುದಾಗಿ ಹೇಳಿ ಅದರಂತೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ನೀಡಿದ ಭರವಸೆಗಳೆಲ್ಲವೂ ಸುಳ್ಳು ಎಂಬುದು 5 ವರ್ಷದಲ್ಲಿ ಜಗಜ್ಜಾಹೀರಾಗಿದೆ. ಪ್ರತಿ ಕನ್ನಡಿಗನ ಮೇಲೆ 46 ಸಾವಿರರೂ. ಸಾಲದ ಹೊರೆ ಹೊರಿಸಿರುವುದಲ್ಲದೆ, ಕೈಗಾರಿಕೆ, ಸೇವಾ ಕ್ಷೇತ್ರ ಮತ್ತಿತರ ಕ್ಷೇತ್ರಗಳಲ್ಲಿ ಅಭಿವೃದಿಟಛಿ ಕುಂಠಿತವಾಗಿದೆ. ಅತ್ಯಂತ ಪ್ರಮುಖವಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನುದಾನ ಕಡಿಮೆಗೊಳಿಸುವ ಮೂಲಕ ನಾಡಿನ ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರದ ಜತೆಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಬಿಎಸ್‌ವೈ ಪ್ರಸ್ತಾಪಿಸಿದ ಅಂಶಗಳು
– ಸಿದ್ಧರಾಮಯ್ಯ ಸರ್ಕಾರದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ.2013-14ರಲ್ಲಿ ಶೇ. 10.5ರಷ್ಟಿದ್ದ ಆರ್ಥಿಕ ಬೆಳವಣಿಗೆ 2017-18ನೇ ಸಾಲಿನಲ್ಲಿ ಶೇ. 6.9ಕ್ಕೆ ಇಳಿದಿದೆ. ಜಿಎಸ್‌ಡಿಪಿ ಶೇ. 68.44ರಿಂದ ಶೇ.55.37ಕ್ಕೆ ಕುಸಿತ ಕಂಡಿದೆ. ತಲಾ ಆದಾಯ ಬೆಳವಣಿಗೆ ಶೇ. 81.92ರಿಂದ ಶೇ. 70.61ಕ್ಕೆ ಬಂದಿದೆ.

– ಶಿಕ್ಷಣ ಕ್ಷೇತ್ರಕ್ಕೆ 2013-14ರಲ್ಲಿ  ಬಜೆಟ್‌ ಗಾತ್ರದ ಶೇ.14.96ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಒದಗಿಸಿದರೆ, 2017-18ರಲ್ಲಿ ಶೇ. 10.14ಷ್ಟು ಮಾತ್ರ ಒದಗಿಸಲಾಗಿದೆ. ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ನೋಂದಣಿ ಪ್ರಮಾಣದಲ್ಲೂ ಇಳಿಮುಖವಾಗಿದೆ.

Advertisement

– ಆರೋಗ್ಯ ಕ್ಷೇತ್ರಕ್ಕೆ 2013-14ರಲ್ಲಿ ಬಜೆಟ್‌ ಮೊತ್ತದ ಶೇ.3.7ರಷ್ಟು ಅನುದಾನ ಒದಗಿಸಿದ್ದರೆ 2017-18ರಲ್ಲಿ ಅದು ಶೇ. 3.47ಕ್ಕೆ ಕುಸಿದಿದೆ. ಇದರ ಪರಿಣಾಮ ಪ್ರತಿ 1ಲಕ್ಷ ಮಂದಿಗೆ ಇರುವ ಆಸ್ಪತ್ರೆಗಳ ಪ್ರಮಾಣ 112 ರಿಂದ 80ಕ್ಕೆ ಇಳಿಮುಖವಾಗಿದೆ.

– ರಾಜ್ಯದಲ್ಲಿ ಸಾಲದ ಮೊತ್ತ ದ್ವಿಗುಣವಾಗಿದ್ದು 2013-14ರಲ್ಲಿ 1.39 ಲಕ್ಷ ಕೋಟಿ ರೂ. ಇದ್ದ ಸಾಲ 2018-19ನೇ ಸಾಲಿಗೆ 2.86 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಹೆಚ್ಚು ಬಡ್ಡಿ ದರದ ಸಾಲದ ಪ್ರಮಾಣ ಒಟ್ಟು ಸಾಲದ ಶೇ. 59 ರಷ್ಟಿದ್ದುದು ಈಗ ಶೇ. 71ಕ್ಕೆ ಏರಿಕೆಯಾಗಿದೆ.

– ಕೈಗಾರಿಕಾ ಕ್ಷೇತ್ರದ ಬೆಳವಣಿಗೆ 2012-13ನೇ ಸಾಲಿನಲ್ಲಿ ಶೇ.8.4 ರಷ್ಟಿದ್ದುದು 2016-17ನೇ ಸಾಲಿನಲ್ಲಿ ಶೇ. 4.8ಕ್ಕೆ ಮತ್ತು ಸೇವಾ ಕ್ಷೇತ್ರದ ಬೆಳವಣಿಗೆ ಶೇ. 19 ಇದ್ದುದು ಪ್ರಸ್ತುತ ಶೇ. 11.2ಕ್ಕೆ ಕುಸಿದಿದೆ.

– ಹೈ-ಕ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಆ ಭಾಗದ ‌ ಐದು ಜಿಲ್ಲೆಗಳು ಮತ್ತು ಇತರ ಭಾಗದ ಜಿಲ್ಲೆಗಳ ಆದಾಯ ಅಂತರ ಹೆಚ್ಚಾಗಿದೆ. ಐದು ಜಿಲ್ಲೆಗಳ ತಲಾ ಆದಾಯ 4.09ರಷ್ಟು ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ.

ಬ್ರೇಕಿಂಗ್‌ಗೆ ಕಾಂಗ್ರೆಸ್‌ ವ್ಯಂಗ್ಯ
ಬೆಂಗಳೂರು:
ಬ್ರೇಕಿಂಗ್‌ ನ್ಯೂಸ್‌ ನೀಡುವುದಾಗಿ ಟ್ವೀಟ್‌ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಗ್ಗೆ ಕಾಂಗ್ರೆಸ್‌ ಟ್ವೀಟರ್‌ ಮೂಲಕ ವ್ಯಂಗ್ಯವಾಡಿದೆ. 

ಶುಕ್ರವಾರ ಸಂಜೆ ಐದು ಗಂಟೆಯಾದರೂ ಯಾವುದೇ ಸುದ್ದಿ ಬ್ರೇಕ್‌ ಮಾಡದಿದ್ದಾಗ ಕಾಂಗ್ರೆಸ್‌ ಟ್ವೀಟರ್‌ ಮೂಲಕ ವಚನ ಭ್ರಷ್ಟ ಯಡಿಯೂರಪ್ಪ, ಅವರ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಲಾಗದವರು ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಡುವರು ಎಂದು ಟ್ವೀಟ್‌ ಮೂಲಕ ಪ್ರಶ್ನಿಸಿದೆ. ಇಷ್ಟೇ ಅಲ್ಲದೇ ಯಡಿಯೂರಪ್ಪ ಅವರ ರಾಜಕೀಯ ನಡೆಯ ಬಗ್ಗೆ
ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಯಡಿಯೂರಪ್ಪ ಹೇಳಿರುವ ಸುಳ್ಳುಗಳ ಪೇಪರ್‌ ಕಟ್ಟಿಂಗ್‌ ಹಾಕಲಾಗಿದೆ. ಕೆಜೆಪಿಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದು, ನಂತರ ಬಿಜೆಪಿ ಸೇರಿದ್ದು, ಮೊದಲು ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಎಂದು ಒತ್ತಾಯಿಸಿ, ಈಗ ಪ್ರತ್ಯೇಕ ಧರ್ಮ ಬೇಡಿಕೆಯಿಂದ ಹಿಂದೆ ಸರಿದಿದ್ದು, ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ
ನಡೆದುಕೊಂಡಿದ್ದು ಕೊನೆಗೆ ಜೈಲಿಗೆ ಹೋಗುತ್ತಾರೆ ಎನ್ನುವುದನ್ನು ವಿಡಿಯೋ ಮೂಲಕ ಯಡಿಯೂರಪ್ಪ ಬ್ರೇಕಿಂಗ್‌ಗೆ ಕೆಪಿಸಿಸಿ ವ್ಯಂಗ್ಯವಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next