Advertisement

Congress ನದ್ದು 60 ಪರ್ಸೆಂಟ್‌ ಸರ್ಕಾರ – ನೂತನ ಪ್ರತಿಪಕ್ಷ ನಾಯಕ ಅಶೋಕ ವಾಗ್ಧಾಳಿ

09:20 PM Nov 18, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್‌ 60 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ವಿಪಕ್ಷ ನಾಯಕ ಆರ್‌.ಅಶೋಕ ವಾಗ್ಧಾಳಿ ನಡೆಸಿದ್ದಾರೆ.

Advertisement

ಪ್ರತಿ ಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸಿಗರು ಶೇ.40 ಕಮಿಷನ್‌ ಆರೋಪಿಸಿದ್ದರು. ಆದರೆ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಒಳಗೊಂಡಂತೆ ಈ ಸರ್ಕಾರದಲ್ಲಿರುವವರು ನಡೆಸುತ್ತಿರುವ ವರ್ಗಾವಣೆ ದಂಧೆಯ ದಾಖಲೆಗಳು ಬಹಿರಂಗಗೊಂಡಿವೆ. ನನ್ನ ಪ್ರಕಾರ ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಆರೋಪಿಸಿದರು.

ಎಲ್ಲರೊಂದಿಗೆ ವಿಶ್ವಾಸ
ಒಂದು ರಾಜಕೀಯ ಪಕ್ಷವೆಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಒಬ್ಬರಿಗೆ ಒಂದು ಸ್ಥಾನ ಸಿಕ್ಕಾಗ ಕೈ ತಪ್ಪಿದವರು ಅಸಮಾಧಾನಗೊಳ್ಳುವುದು ಸಹಜ. ಆದರೆ ನಮ್ಮ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತಾರೆ. ಅಸಮಾಧಾನಗೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಬೇಸರಗೊಂಡವರ ಜತೆಗೆ ನಾನೇ ಖುದ್ದು ಮಾತನಾಡುತ್ತೇನೆ. ಯಾರೂ ಪಕ್ಷದ ತೀರ್ಮಾನವನ್ನು ವಿರೋಧಿಸಬಾರದು. ಕೆಲ ಸಂದರ್ಭಗಳಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಪಕ್ಷವಾಗಿ ಎಲ್ಲವನ್ನು ವಿರೋಧಿಸುವುದೇ ನಮ್ಮ ಕೆಲಸವಲ್ಲ. ನಾಡಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ದನಿಯಾಗಿ ಸದನದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡುತ್ತೇವೆ. ಅದಕ್ಕೂ ಬಗ್ಗದಿದ್ದಾಗ ಸರ್ಕಾರವನ್ನೇ ಕಿತ್ತೆಸೆಯಲು ಹಿಂದೆ ಮುಂದೆ ನೋಡುವುದಿಲ್ಲ ಎಂದರು.

ಕೋರ್‌ ಕಮಿಟಿ
ಇದಾದ ಬಳಿಕ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿ ಅರ್ಧಗಂಟೆಗೂ ಹೆಚ್ಚು ಕಾಲ ಸುದೀರ್ಘ‌ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು ಸದ್ಯದಲ್ಲೇ ಕೋರ್‌ ಕಮಿಟಿ ಪುನಾರಚನೆ ಬಗ್ಗೆ ಮುನ್ಸೂಚನೆ ನೀಡಿದರು. ಸಾಯಂಕಾಲ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

Advertisement

ಹೋರಾಟ
ಉತ್ತರ ಕರ್ನಾಟಕ ಭಾಗದಿಂದ ಇಬ್ಬರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಕರಾವಳಿ ಕರ್ನಾಟಕ ಭಾಗದಿಂದ ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದರು. ಮಧ್ಯ ಕರ್ನಾಟಕದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಇತಿಹಾಸದಲ್ಲಿ ಹಳೆ ಮೈಸೂರು ಭಾಗಕ್ಕೆ ಯಾವತ್ತೂ ಪ್ರಾತಿನಿಧ್ಯ ಸಿಕ್ಕಿಲ್ಲ. ಇದೇ ಮೊದಲು ಸಿಕ್ಕಿದೆ. ನಮ್ಮಲ್ಲಿ ಆ ಬೇಧ- ಭಾವ ಇಲ್ಲ. ಎಲ್ಲರನ್ನೂ ಇವತ್ತಿನಿಂದಲೇ ಮಾತನಾಡಿಸಿ ಅಸಮಾಧಾನ ಸರಿಪಡಿಸುತ್ತೇವೆ ಎಂದರು.

ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಾರೆ. ಆದರೆ ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂಬ ಪ್ರಶ್ನೆಗೆ, “ನಮ್ಮ ಕಾಟ ತಾಳಲಾರದೆ ಕಳೆದ ಅಧಿವೇಶನ ಸಂದರ್ಭದಲ್ಲಿ 10 ಜನರನ್ನು ಅಮಾನತು ಮಾಡಿದ್ದರು. ಆ ರೀತಿ ಹೋರಾಟ ನಡೆಸಿದ್ದೆವು. ಈಗ ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷ ಎರಡೂ ಆಯ್ಕೆಯಾಗಿದೆ. ಮತ್ತಷ್ಟು ಸಮರ್ಥವಾಗಿ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ನೈತಿಕ ಅಧಿಕಾರ ಇಲ್ಲ. ಅಧಿಕಾರಕ್ಕಾಗಿ ತರಗೆಲೆಯಂತೆ ಜೆಡಿಎಸ್‌, ಜೆಡಿಯು ಸೇರಿ ಎಲ್ಲಾ ಪಕ್ಷಗಳನ್ನು ಸುತ್ತಿ ಬಂದಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next