Advertisement

6ನೇ ಗ್ಯಾರಂಟಿ ಘೋಷಣೆ ಮಾಡಿದ ಕಾಂಗ್ರೆಸ್‌: ಏನಿದೆ 6ನೇ ಗ್ಯಾರಂಟಿಯಲ್ಲಿ…

10:18 PM Apr 30, 2023 | Team Udayavani |

ಖಾನಾಪುರ: ಐದು “ಗ್ಯಾರಂಟಿ’ ಘೋಷಿಸಿ ಉತ್ಸಾಹದಲ್ಲಿರುವ ಕಾಂಗ್ರೆಸ್‌ ಈಗ ಮತ್ತೂಂದು ಗ್ಯಾರಂಟಿ ಘೋಷಿಸಿದೆ. ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವುದಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಕಟಿಸಿದ್ದಾರೆ.

Advertisement

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಭಾನುವಾರ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲಿ 11,500ರೂ.ಗಳಿಂದ 15,000 ಸಾವಿರ ರೂ., ಸಹಾಯಕಿಯರಿಗೆ ಹಾಲಿ 7,500 ರೂ.ದಿಂದ 10,000 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗೆ ಹಾಲಿ 5,000 ರೂ.ಗ ಳಿಂದ 8,000 ರೂ. ಹಾಗೂ ಬಿಸಿಯೂಟ ಅಡುಗೆ ಕಾರ್ಯಕರ್ತೆಯರಿಗೆ ಹಾಲಿ 3,700 ರೂ.ದಿಂದ 5,000 ರೂ.ಗಳಿಗೆ ಗೌರವಧನ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.

ಲೂಟಿ-ಜೂಟಿ ಸರ್ಕಾರ:
ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ 1,100 ರೂ.ಗೆ ಏರಿಸಿದೆ. ರೈತರ ಟ್ರಾÂಕ್ಟರ್‌ಗೆ ಕೂಡ ಜಿಎಸ್‌ಟಿ ಹೇರಲಾಗಿದೆ. ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ತುಂಬಿಕೊಳ್ಳುವ ಕೆಲಸ ಮಾಡಿಲ್ಲ. ಶಾಸಕನ ಪುತ್ರನ ಬಳಿ ಕಂತೆ ಕಂತೆ ಹಣ ಸಿಕ್ಕರೂ ಯಾವುದೇ ಶಿಕ್ಷೆ ಆಗಿಲ್ಲ. ಗುತ್ತಿಗೆದಾರರ ಸಂಘದಿಂದ ಭ್ರಷ್ಟಾಚಾರ ಬಗ್ಗೆ ಪತ್ರ ಬರೆದರೂ ಕ್ರಮ ಇಲ್ಲ. ರಾಜ್ಯದಲ್ಲಿ ಲೂಟಿ-ಜೂಟಿ ಸರ್ಕಾರ ಇದೆ. ಚುನಾವಣೆ ವೇಳೆ ಮೀಸಲಾತಿ ಏರಿಕೆ ಮಾಡಿದ್ದಾರೆ. ಅವರು ಭರವಸೆ ನೀಡುತ್ತಾರೆ ಯೇ ಹೊರತು ಈಡೇರಿಸುವುದಿಲ್ಲ ಎಂದರು.

ರಾಜ್ಯ ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ 40 ಪರ್ಸೆಂಟ್‌ ಸರ್ಕಾರವಾಗಿ ಗುರುತಿಸಿಕೊಂಡಿದೆ. ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಸಿಎಂ ಬದಲಾವಣೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರಿ ಹುದ್ದೆಗಳಿಗೆ ರೇಟ್‌ ನಿಗದಿಗೊಳಿಸಿ ಒಂದೂವರೆ ಲಕ್ಷ ಕೋಟಿ ರೂ. ಲೂಟಿ ಮಾಡಿದೆ. ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದರೂ ರಾಜ್ಯದಲ್ಲಿ ಇಬ್ಬರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿ ಗೊಂದಲ ಮೂಡಿಸಿದ್ದಾರೆ. ಕೋವಿಡ್‌ ಸಮಯದಲ್ಲೂ ಇವರ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಮಕ್ಕಳು ತಿನ್ನು ವ ಮೊಟ್ಟೆಯಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಕರ್ನಾಟಕದಲ್ಲಿ ಎಲ್ಲ ಸಂಪತ್ತು, ವೈಭವವಿದೆ. ಭವಿಷ್ಯಕ್ಕಾಗಿ ಈ ಪ್ರದೇಶ ಅಭಿವೃದ್ಧಿಪಡಿಸಬೇಕಿದೆ. ಲೂಟಿ ಹೊಡೆಯುವ ಸರ್ಕಾರ ಕಿತ್ತೂಗೆದು ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದರು.

ಆರಂಭದಲ್ಲಿ ಪ್ರಿಯಾಂಕಾ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಹೇಳಿದರು. ನಂತರ ಶಾಸಕಿ ಡಾ.ಅಂಜಲಿ ನಿಂಬಾಳಕರ ಮರಾಠಿಯಲ್ಲಿ ಕೂಡ ಹೇಳುವಂತೆ ಹೇಳಿದಾಗ ಮರಾಠಿಯಲ್ಲೂ ನಮಸ್ಕಾರ ಹೇಳಿದರು. ಶಾಸಕಿ ಅಂಜಲಿ ಅವರು ಪ್ರಿಯಾಂಕಾ ಅವರನ್ನು ತಮ್ಮ ವಾಹನದಲ್ಲಿ ಕೂಡಿಸಿಕೊಂಡು ತಾವೇ ವಾಹನ ಚಲಾಯಿಸಿದ್ದು ವಿಶೇಷವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next