ಚಿಕ್ಕಬಳ್ಳಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರೆಂಟಿ ಯೋಜನೆಗಳ ಪೈಕಿ ಪ್ರತಿ ಮನೆಗೆ ಮಾಸಿಕ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ ಜಿಲ್ಲಾದ್ಯಂತ ಬರೋಬ್ಬರಿ 2.20 ಲಕ್ಷಕ್ಕೂ ಅಧಿಕ ಕುಟುಂಬಗಳು ಅರ್ಹ ವಾಗುವ ನಿರೀಕ್ಷೆ ಇದೆ.
ಯಾವುದೇ ಆದಾಯ ಮಿತಿ ಹೇರದೆ ಕೇವಲ 200 ಯೂನಿಟ್ ವಿದ್ಯುತ್‌ನ್ನು ಯಾವುದೇ ಶುಲ್ಕ ಪಾವತಿಸದೇ ಉಚಿತವಾಗಿ ನೀಡುವ ಗೃಹಜ್ಯೋತಿ ಗ್ಯಾರೆಂಟಿ ಜುಲೈ 1ರಿಂದಲೇ ಜಾರಿಗೊಳ್ಳಲಿದ್ದು, ಜಿಲ್ಲೆಯ ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿ ಒಟ್ಟು 1,96,242 ಗೃಹ ಬಳಕೆ ವಿದ್ಯುತ್ ಸಂಪರ್ಕದ ಮೀಟರ್‌ಗಳಿದ್ದರೆ, ಚಿಂತಾಮಣಿ ಉಪ ವಿಭಾಗದಲ್ಲಿ 1,34,918 ಗೃಹ ಬಳಕೆ ವಿದ್ಯುತ್ ಸಂಪರ್ಕದ ಮೀಟರ್‌ಗಳಿದ್ದು, ಅವರಿಗೆ ಈ ಯೋಜನೆ ಲಾಭವಾಗುವ ನಿರೀಕ್ಷೆ ಇದೆ.
ಎಲ್ಲೆಲ್ಲೆ ಎಷ್ಟೇಷ್ಟು?: ಚಿಕ್ಕಬಳ್ಳಾಪುರ ಉಪ ವಿಭಾಗಕ್ಕೆ ಸೇರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 61,852 ಗೃಹ ಬಳಕೆ ಸಂಪರ್ಕದ ಮೀಟರ್‌ಗಳಿದ್ದರೆ, ಗೌರಿಬಿದನೂರು ತಾ.75,704, ಬಾಗೇಪಲ್ಲಿ 44,151, ಗುಡಿಬಂಡೆ 14,535 ಸೇರಿ ಒಟ್ಟು 1,96,242 ಗೃಹ ಬಳಕೆ ಮೀಟರ್‌ಗಳಿವೆ. ಇನ್ನೂ ಜಿಲ್ಲೆಯ ಚಿಂತಾಮಣಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 1,34,918 ಗೃಹ ಬಳಕೆ ಮಾಡುವ ವಿದ್ಯುತ್ ಸಂಪರ್ಕದ ಮೀಟರ್ ಗಳಿವೆ. ಆ ಪೈಕಿ ಚಿಂತಾಮಣಿ ತಾಲೂಕಲ್ಲಿ 77,878, ರೇಷ್ಮೆ ನಗರ ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 75,040 ಮೀಟರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಲ್ಲಿ ಸಂತಸ: ರಾಜ್ಯ ಕಾಂಗ್ರೆಸ್ ಸರ್ಕಾರ, ಚುನಾವಣೆಗೂ ಮುನ್ನ ನೀಡಿದ್ದ 5 ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತರುತ್ತಿರುವುದು ಸಹಜವಾಗಿಯೇ ಜಿಲ್ಲೆ ಯ ಸಾರ್ವಜನಿಕ ವಲಯದಲ್ಲಿ ಅದರಲ್ಲೂ ರೈತಾಪಿ ಕೃಷಿ ಕೂಲಿ ಕಾರ್ಮಿಕರಲ್ಲಿ ಸಂತಸದ ಭಾವ ಕಾಣುತ್ತಿದೆ. ಜುಲೈ 1 ರಿಂದಲೇ ಅನ್ನಭಾಗ್ಯದ ಯೋಜನೆಯಡಿ ಬಿಪಿಎಲ್ ಹಾಗೂ ಎಎವೈ ಪಡಿತರದಾರರಿಗೆ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿರುವ ಸರ್ಕಾರ, ಜತೆಗೆ ಜು.1ರಿಂದಲೇ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ ಸಂಪರ್ಕ ಹಾಗೂ ಜೂನ್ 11ರಿಂದ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಸಂತಸ ಮೂಡಲು ಕಾರಣವಾಗಿದೆ.
ಗೃಹಜ್ಯೋತಿ ಅನುಷ್ಠಾನ ಹೇಗೆ ಆಗುತ್ತೆ? : ಗೃಹಜ್ಯೋತಿ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳಬಹುದೆಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳೊಂದಿಗೆ ಸಾಕಷ್ಟು ವಿಚಾರ ವಿನಿಮಯ ಮಾಡಿ ಒಂದು ಕುಟುಂಬ ಕಳೆದ ವರ್ಷ ಅಂದರೆ 12 ತಿಂಗಳ ಕಾಲ ಸರಾಸರಿ ಎಷ್ಟು ಯೂನಿಟ್ ವಿದ್ಯುತ್ ಬಳಸಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಅದರ ಮೇಲೆ ಶೇ.10 ರಷ್ಟು ಯೂನಿಟ್ ಸೇರಿಸಿ 200 ಯೂನಿಟ್ ಒಳಗೆ ವಿದ್ಯುತ್ ಬಳಸಿದ್ದರೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಿದೆ. ಒಂದು ಕುಟುಂಬಕ್ಕೆ ಮಾಸಿಕ 150 ಯೂನಿಟ್ ಅಥವಾ 170 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ ಅದಕ್ಕೆ ಹೆಚ್ಚುವರಿಯಾಗಿ 10 ಯೂನಿಟ್ ಸೇರಿಸಿ ಅವರ ಬಳಕೆ ಪ್ರಮಾಣ 160 ಅಥವಾ 180 ಅಂತ ಪರಿಗಣಿಸಿ ಅಷ್ಟು ಯೂನಿಟ್ ವಿದ್ಯುತ್‌ಗೆ ಬಿಲ್ ಸೇರಿಸದೆ ಉಚಿತವಾಗಿ ವಿದ್ಯುತ್ ನೀಡಲಿದೆ.
ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳಲ್ಲಿ ಒಟ್ಟು 1,33,317 ಗೃಹ ಬಳಕೆ ಕುಟುಂಬಗಳಿದ್ದು (ವಿದ್ಯುತ್ ಮಾಪನ ಮೀಟರ್‌ಗಳು) ಆ ಪೈಕಿ 39,446 ಮೀಟರ್‌ಗಳಿಗೆ ಭಾಗ್ಯಜ್ಯೋತಿ ಯೋಜನೆಯಡಿ 40 ಯೂನಿಟ್ ಒಳಗೆ ವಿದ್ಯುತ್ ಪೂರೈಕೆ ಹಿನ್ನೆಲೆಯಲ್ಲಿ ಸರ್ಕಾರವೇ ಉಚಿತವಾಗಿ ವಿದ್ಯುತ್ ಶುಲ್ಕ ಪಾವತಿ ಮಾಡುತ್ತಿತ್ತು. ಉಳಿದಂತೆ 93,817 ವಿದ್ಯುತ್ ಸ್ಥಾವರಗಳಿಂದ ಮಾಸಿಕ 3.26 ಕೋಟಿ 3.26 ಕೋಟಿ ಶುಲ್ಕ ಸಂಗ್ರಹವಾಗುತ್ತಿತ್ತು.
– ವೆಂಕಟೇಶಪ್ಪ, ಇಇ, ಬೆಸ್ಕಾಂ ಚಿಂತಾಮಣಿ ವಿಭಾಗ
ಕಾಂಗ್ರೆಸ್ ಸರ್ಕಾರ, ಚುನಾವಣಾ ಪೂರ್ವದಲ್ಲಿ ಪಕ್ಷ ಘೋಷಿಸಿರುವಂತೆ ಪ್ರತಿ ಮನೆಗೂ 200 ಯೂನಿಟ್ ವಿದ್ಯು ತ್‌ನ್ನು ಉಚಿತವಾಗಿ ನೀಡುವ ತೀರ್ಮಾನ ಘೋಷಿಸಿರು ವುದು ಬಡ ಕುಟುಂಬಗಳಿಗೆ ಸಾಕಷ್ಟು ವರದಾನ ಆಗಲಿದೆ.
– ಮುನಿರಾಜು, ಚಿಕ್ಕಬಳ್ಳಾಪುರ ನಿವಾಸಿ
–ಕಾಗತಿ ನಾಗರಾಜಪ್ಪ