Advertisement

Congress Govt; ಮುಂದಿನ ಐದು ವರ್ಷಗಳವರೆಗೂ ಈ ಗ್ಯಾರಂಟಿ ಯೋಜನೆ ಇರಲಿದೆ: ಮಧು ಬಂಗಾರಪ್ಪ

05:49 PM Feb 10, 2024 | Team Udayavani |

ತೀರ್ಥಹಳ್ಳಿ : ನಮ್ಮ ಸರ್ಕಾರದ ವತಿಯಿಂದ ಇವತ್ತು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶ ಇದಾಗಿದೆ. ಬಹಳ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ನಾವು ಮತ ಕೇಳುವ ಮುಂಚೆ ನೀಡುವ ಭರವಸೆ ಈಡೇರಿಸಿದ್ದೇವೆ ಎಂಬ ತೃಪ್ತಿ ನನಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಶನಿವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಗ್ಯಾರಂಟಿ ಯೋಜನೆಯ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವ ಜನಾಂಗದ ಶಾಂತಿಯ ತೋಟ ಹುಟ್ಟಿದ್ದೆ ಈ ತೀರ್ಥಹಳ್ಳಿಯಿಂದ ರಾಷ್ಟ್ರಕವಿ ಕುವೆಂಪುರವರಿಂದ, ಸಿದ್ದರಾಮಯ್ಯನವರು ಕಿಮ್ಮನೆ ರತ್ನಾಕರ್, ನಾನು ಕೂಡ ಸರ್ಕಾರ ಶಾಲೆಯಲ್ಲಿ ಓದಿದವರು. ಇವತ್ತು ನಾನು ಇಲ್ಲಿ ನಿಂತಿದ್ದೇನೆ ಎಂದಾಗ ಬಂಗಾರಪ್ಪಜಿ ಅವರ ಹೆಸರು ಹೇಳದೇ ಇದ್ದರೆ ತಪ್ಪಾಗುತ್ತದೆ ಅವರು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದವರು. ಎಲ್ಲಾ ಕಡೆ ಸರ್ಕಾರಿ ಶಾಲೆ ಸರಿ ಇಲ್ಲ ಸರಿ ಇಲ್ಲ ಎಂದು ಹೇಳುತ್ತಾರೆ ವ್ಯವಸ್ಥೆಯಲ್ಲಿ ಸ್ವಲ್ಪ ಆಚೆ ಈಚೆ ಆಗಿರಬಹುದು ಆದರೆ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಇದೆ ಎಂದರು.

ಮಕ್ಕಳು ದೇವರ ಸಮಾನ ಅವರಿಗೆ ಸೇವೆ ಮಾಡುವ ಅವಕಾಶ ಸರ್ಕಾರ ನನಗೆ ಕೊಟ್ಟಿದೆ. ಇವತ್ತು ಒಂದು ಕೋಟಿ ಇಪ್ಪತ್ತು ಲಕ್ಷ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಇದ್ದಾರೆ ಎಂಬುದು ನನಗೆ ಹೆಮ್ಮೆಯ ಸಂಗತಿ. ಮಕ್ಕಳಿಗೆ ಯೂನಿಫಾರ್ಮ್ ಹಾಲು ಊಟ ಮೊಟ್ಟೆ ಎಲ್ಲವನ್ನು ಉಚಿತವಾಗಿ ಸರ್ಕಾರಿ ಶಾಲೆಯಲ್ಲಿ ನೀಡುತ್ತಿದ್ದೇವೆ. ಮಕ್ಕಳ ಶಿಕ್ಷಣದ ಜೊತೆಗೆ ಅವರ ಪೌಷ್ಠಿಕತೆಯ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ.ಮಕ್ಕಳ ಎಕ್ಸಾಮ್ ಬಗ್ಗೆ ತಂದೆ ತಾಯಿಗಳಿಗೆ ಟೆನ್ಶನ್ ಇತ್ತು ಆದರೆ ಇವತ್ತು ಮನೆ ನಡೆಸೋಕೆ ಹೆಣ್ಣು ಮಕ್ಕಳಿಗೆ ಟೆನ್ಶನ್ ಇಲ್ಲ. ಮಕ್ಕಳ ತಂದೆ ತಾಯಿ ಶಿಕ್ಷಕರು ನಮ್ಮ ಇಲಾಖೆ ಫೇಲಾದರೆ ಮಾತ್ರ ಮಕ್ಕಳು ಫೇಲ್ ಆಗುತ್ತಾರೆ ಇಲ್ಲದಿದ್ದರೆ ಮಕ್ಕಳು ಯಾವುದೇ ಕಾರಣಕ್ಕೂ ಫೇಲ್ ಆಗುವುದಿಲ್ಲ.

ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಕರೆಂಟ್ ಕೊಟ್ಟಿದ್ದೇವೆ. ಶಾಲೆಯಲ್ಲಿ ಶಿಕ್ಷಕರು ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಸಂಜೆಯೂ ಕೂಡ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ನೀಟ್ ಟ್ರೈನಿಂಗ್ ಕೊಡುವ ವ್ಯವಸ್ಥೆ ಮಾಡಲು ಸಿದ್ದರಾಮಯ್ಯನವರೊಂದಿಗೆ ಮಾತನಾಡಿದ್ದೇನೆ ಎಂದರು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಗ್ಯಾರಂಟಿ ಯೋಜನೆಗಳು ಯಾರಿಗೆ ಸಿಕ್ಕಿಲ್ಲ ಅಂತವರಿಗೆ ಕೊಡಿಸುವ ವ್ಯವಸ್ಥೆ ಮಾಡುವ ಕಾರ್ಯಕ್ರಮ ಇದಾಗಿದೆ. ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದಿದೆ ಇಲ್ಲಿ ಯಾವುದೇ ಮಧ್ಯವರ್ತಿಗಳು ಇಲ್ಲ. ನೇರವಾಗಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತಿದೆ. ಪ್ರತಿಯೊಂದು ಕುಟುಂಬಗಳಿಗೂ ಆಸರೆ ಆಗುವ ಉದ್ದೇಶದಿಂದ ಈ ಗ್ಯಾರಂಟಿ ಯೋಜನೆ ಮಾಡಿದ್ದೇವೆ ಮತ ಪಡೆಯುವ ಉದ್ದೇಶ ಒಂದೇ ಆಗಿರಲಿಲ್ಲ. ಇದು ನಿಮ್ಮ ಸರ್ಕಾರ ನಿಮಗೆ ಸೇವೆ ಮಾಡಲು ನಾನು ಸಚಿವನಾಗಿದ್ದೇನೆ. ಈ ಸರ್ಕಾರ ಬರುವುದಕ್ಕೆ ಮುಂಚೆ ವರ್ಷಕ್ಕೆ 24,000 ಸಿಗುತ್ತದೆ ಎಂದು ಯಾರು ಅಂದುಕೊಂಡಿರಲಿಲ್ಲ ಎಂದರು.

Advertisement

ಈ ಗ್ಯಾರಂಟಿಗೆ ಆಯಸ್ಸು ಇರುವುದಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ ಬರೆದಿಟ್ಟುಕೊಳ್ಳಿ ಮುಂದಿನ ಐದು ವರ್ಷಗಳವರೆಗೂ ಈ ಗ್ಯಾರಂಟಿ ಯೋಜನೆ ಇರುತ್ತದೆ. ಕೆಲವರು ಟೀಕೆ ಟಿಪ್ಪಣಿ ಮಾಡಿದರು ಜನರಿಗೆ ಫ್ರೀ ಕೊಟ್ಟರೆ ಸೋಮಾರಿಗಳಾಗುತ್ತಾರೆ ಎಂದು ಹೇಳಿದರು.

ಬಂಗಾರಪ್ಪನವರು ಫ್ರೀ ಕರೆಂಟ್ ಕೊಟ್ಟರು 37 ವರ್ಷದಿಂದ ರೈತರು ಯಾರು ಕರೆಂಟ್ ಬಿಲ್ ಕಟ್ಟುತ್ತಿಲ್ಲ. ರಾಜ್ಯದಲ್ಲಿ ಶೇಕಡ 90 ಪರ್ಸೆಂಟ್ ಫ್ರೀ ಕರೆಂಟ್ ಕೊಡುತ್ತಿದ್ದೇವೆ. ಯಾರಿಗೆ 2,000 ಸಿಕ್ಕಿಲ್ಲ ಅಂತವರು ನಮ್ಮ ಆಶಾ ಕಾರ್ಯಕರ್ತರಿಗೆ ನೆನಪು ಮಾಡಿ ಅವರು ಬರುವ ರೀತಿ ವ್ಯವಸ್ಥೆ ಮಾಡುತ್ತಾರೆ.ಯಾರಿಗೆ ಸಿಕ್ಕಿಲ್ಲ ಅಂತವರು ನಮ್ಮ ಗಮನಕ್ಕೆ ತರುವ ಕೆಲಸ ಮಾಡಬೇಕು. ಹಾಗೆಯೇ ನೀವು ಯಾವ ಪಕ್ಷದವರು ಯಾವ ಜಾತಿಯವರು ಎಂದು ಕೇಳುವುದಿಲ್ಲ ನಿಮ್ಮ ಸೇವೆ ಮಾಡಲಿಕ್ಕೆ ನಾವು ಸಿದ್ಧರಿದ್ದೇವೆ ಎಂದರು.

ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಒಂದು ವಾರದ ಹಿಂದೆ ಶಿವಮೊಗ್ಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಆಗಮಿಸಿ ಅಧಿಕಾರದ ನಂತರ ಮೊದಲ ಬಾರಿ ತೀರ್ಥಹಳ್ಳಿಗೆ ಬಂದಿದ್ದೇನೆ. ಈಗಾಗಲೇ ಕುಪ್ಪಳ್ಳಿಗೆ ಬಂದಿದ್ದೆ, ತೀರ್ಥಹಳ್ಳಿ ಒಂದು ಸುಂದರವಾದ ಊರು ಎಂದರೆ ತಪ್ಪಾಗಲಾರದು ಎಂದರು.

ಗ್ಯಾರಂಟಿ ಯೋಜನೆ ಮದ್ಯವರ್ತಿಗಳಿಲ್ಲದೆ ನಿಮ್ಮ ಮನೆಗೆ ತಲುಪಿಸುವ ಒಳ್ಳೆಯ ಯೋಜನೆ ಆಗಿದೆ. ಹಲವರಿಗೆ ಈ ಯೋಜನೆ ಸಿಕ್ಕಿಲ್ಲ. ವಂಚಿತರಾದವರಿಗೆ ಈ ಯೋಜನೆ ಮುಟ್ಟಿಸುವಂತಹ ಕೆಲಸ ಜಿಲ್ಲಾಡಳಿತ ಮಾಡುತ್ತದೆ. ಇಲ್ಲಿಯವರೆಗೆ ತೀರ್ಥಹಳ್ಳಿ 31 ಸಾವಿರ ಗೃಹಲಕ್ಷ್ಮಿ ಯೋಜನೆ 38 ಸಾವಿರ ಮನೆಗೆ ಗೃಹಜ್ಯೋತಿ ಯೋಜನೆ ಹಾಗೂ ಅನ್ನ ಭಾಗ್ಯದ ಯೋಜನೆಯಿಂದ 27,154 ಮಂದಿಗೆ ಹಣ ಹೋಗುತ್ತಿದೆ ಎಂದರು.

ಗೀತಾ ರಮೇಶ್ ಮಾತನಾಡಿ, ಈ ಯೋಜನೆಗಳು ತುಂಬಾ ಅನಿವಾರ್ಯತೆ ಇತ್ತು, ಗ್ಯಾರಂಟಿ ಯೋಜನೆ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದೆಯೇ ಇಲ್ಲವೇ ನೋಡಲು ಈ ಸಮಾವೇಶದ ಅಗತ್ಯತೆ ಇತ್ತು. ಸರ್ಕಾರದ ಐದು ಗ್ಯಾರಂಟಿ ಯೋಜನೆಯನ್ನು ಕೊಟ್ಟ ಮಾತಿನಂತೆ ನಡೆದ ಸರ್ಕಾರ ನಮ್ಮ ಸಿದ್ದರಾಮಯ್ಯನವರ ಸರ್ಕಾರ. ಮಹಿಳೆಯರ ಸಬಲೀಕರಣ ಮಾಡಿದ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ ಎಂದರು.

ಈ ಸಂದರ್ಭದಲ್ಲಿ ಪ. ಪಂ ಉಪಾಧ್ಯಕ್ಷರಾದ ರಹಮತುಲ್ಲ ಅಸಾದಿ, ಈಓ ಶೈಲಾ, ಸಿಈಓ ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next