Advertisement

ದ್ವೇಷದ ರಾಜಕಾರಣ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ: ಬಿ.ವೈ. ವಿಜಯೇಂದ್ರ

03:08 PM Jul 15, 2023 | keerthan |

ಶಿಕಾರಿಪುರ: ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಹಗರಣಗಳು ನಡೆದಿದೆ ಎಂಬುವ ರೀತಿಯಲ್ಲಿ ರಾಜ್ಯ ಸರ್ಕಾರ ಬಿಂಬಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದರು, ಆದರೆ ಚುನಾವಣೆ ಮುಗಿದ ನಂತರವೂ ಅದೇ ದಾಟಿಯಲ್ಲಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ನಮ್ಮ ಪಕ್ಷ ಇದರ ಬಗ್ಗೆ ಹೆದರಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ. ರಾಷ್ಟ್ರೋತ್ಥಾನ ಪರಿಷತ್ ಅಡಿಯಲ್ಲಿ ಜನಸೇವಾ ವಿದ್ಯಾ ಕೇಂದ್ರ ಕಳೆದ 30 -40 ವರ್ಷಗಳಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿದೆ. ಬಡ ಮಕ್ಕಳು ಶಿಕ್ಷಣ ಪಡೆದು, ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಆದರೆ ನೂತನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಟ್ಟ 35 ಎಕರೆ ಭೂಮಿ ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿರುವುದು ದುರಂತವಾಗಿದೆ. ಶಿಕ್ಷಣ ಕ್ಷೇತ್ರದ ಮೇಲೂ ಈ ಸರ್ಕಾರದ ವಕ್ರ ದೃಷ್ಟಿ ಬೀರಿದೆ. ಇದು ಸಚಿವರಿಗೆ, ಮುಖ್ಯಮಂತ್ರಿ ಅವರಿಗೆ ಶೋಭೆ ತರುವಂತಹದಲ್ಲ, ವಿನಾಕಾರಣ ರಾಜಕಾರಣ ಮಾಡಬಾರದು ಎಂದರು.

ಗುಣಮಟ್ಟದ ಶಿಕ್ಷಣವನ್ನು ಕೊಡುವಂತಹ ಶಿಕ್ಷಣ ಕೇಂದ್ರಕ್ಕೆ ಕೊಟ್ಟ ಭೂಮಿಯನ್ನು ಹಿಂಪಡೆಯಬಾರದು. ಯಾರು ಯಾರಿಗೆ ಭೂಮಿ ಕೊಟ್ಟಿದ್ದಾರೆ ಎಂಬ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿ. ಭೂಮಿಯನ್ನು ಪಡೆದ ಶಿಕ್ಷಣ ಸಂಸ್ಥೆಗಳು ಯಾವ ರೀತಿ ಉಪಯೋಗಿಸುತ್ತಿದ್ದಾರೆ ಚರ್ಚೆಯಾಗಲಿ, ನ್ಯಾಯಯುತವಾಗಿ ಕೊಟ್ಟಂತ ಜಮೀನಿಗೂ ಕನ್ನ ಹಾಕುತ್ತಿದ್ದಾರೆ, ಮೂಗು ತೂರಿಸುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಅಂದರೆ ದೇವರು ಮೆಚ್ಚುವುದಿಲ್ಲ. ಕಳೆದ 30 ವರ್ಷದಲ್ಲಿ ಸರ್ಕಾರಗಳು ಯಾರಿಗೆ ಭೂಮಿ ಕೊಟ್ಟಿದೆ, ಪರಭಾರೆ ಮಾಡಿದೆ ಎಂಬುದರ ಬಗ್ಗೆ ಚರ್ಚೆಯಾಗಲಿ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹನಿಮೂನ್ ಸಮಯದಿಂದ ಇನ್ನೂ ಹೊರ ಬಂದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಪೂರ್ಣ ಆಗುತ್ತಿದೆ. ಅಧಿವೇಶನದಲ್ಲಿ ಗ್ಯಾರಂಟಿ ಯೋಜನೆ ಬಗ್ಗೆಯೇ ಚರ್ಚೆ ಆಗುತ್ತಿದೆ. ರಾಜ್ಯದಲ್ಲಿ ನಿರ್ಮಾಣ ಆಗಿರುವ ಬರಗಾಲ ಬಗ್ಗೆ ಶೂನ್ಯ ವೇಳೆಯಲ್ಲಿ ಚರ್ಚೆ ಮಾಡಿದ್ದೇನೆ. ರಾಜ್ಯದ 21 ಜಿಲ್ಲೆಗಳಲ್ಲಿ ಬರಗಾಲದ ವಾತಾವರಣ ಇದ್ದು, ರೈತರು ಕಂಗಾಲಾಗಿದ್ದಾರೆ. ಮಲೆನಾಡಿನಲ್ಲೂ ಕುಡಿಯುವ ನೀರಿನ ಆಹಾಕಾರ ಎದ್ದಿದೆ. ರಾಜ್ಯದ ಜಲಾಶಯದಲ್ಲಿ ನೀರಿಲ್ಲ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಅಧಿವೇಶನದಲ್ಲಿ ಇದ್ಯಾವುದೂ ಚರ್ಚೆ ಆಗುತ್ತಿಲ್ಲ. ಕೆಲಸಕ್ಕೆ ಬಾರದ ವಿಷಯಗಳು ಚರ್ಚೆ ಆಗುತ್ತಿವೆ ಎಂದು ಆರೋಪಿಸಿದರು.

ಬಿಜೆಪಿ ವಿರೋಧ ಪಕ್ಷ ನಾಯಕನ ಆಯ್ಕೆ ವಿಚಾರ ಚರ್ಚಿಸುವುದಿಲ್ಲ. ಶಾಸಕನಾಗಿ ನಮ್ಮ ತಾಲ್ಲೂಕಿನ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಯಶಸ್ವಿ ಶಾಸಕನಾಗಿ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ ಎಂದರು.

Advertisement

ಸಚಿವ ಮಧು ಬಂಗಾರಪ್ಪ ಹೇಳಿಕೆ ದುರಹಂಕಾರದ ಪರಮಾವಧಿಯಾಗಿದೆ. 136 ಸೀಟು ಬಂದಿದೆ ಅಂತಾ ಆನೆ ನಡೆದಿದ್ದೇ ದಾರಿ ಎಂಬಂತೆ ಸಚಿವರು, ಶಾಸಕರು ವರ್ತಿಸುತ್ತಿದ್ದಾರೆ. ಇದಕ್ಕೆ ಉತ್ತರ ಸದನದ ಒಳಗೆ ಹೊರಗೆ ಕೊಡುತ್ತೇವೆ. ಅಧಿಕಾರ ಯಾವುದು ಶಾಶ್ವತ ಅಲ್ಲ, ಅಧಿಕಾರ ಎನ್ನುವುದು ಶಾಶ್ವತ ಅಲ್ಲ. ಈ ರೀತಿಯ ದೌರ್ಜನ್ಯ, ದಬ್ಬಾಳಿಕೆ ಮೆಟ್ಟಿ ನಿಲ್ಲುವಂತಹ ಶಕ್ತಿ ಬಿಜೆಪಿಗೆ ಇದೆ. ನಾವು ಅಧಿಕಾರಕ್ಕೆ ಬಂದಿಲ್ಲ ನಿಜ, ನಮ್ಮನ್ನು ರಾಜ್ಯದ ಜನ ಅಧಿಕೃತ ವಿರೋಧ ಪಕ್ಷದ ಸ್ಥಾನಕ್ಕೆ ಕೂರಿಸಿದೆ. ಹಾಗಂತ ಮನಸೋ ಇಚ್ಚೆ ಆಡಳಿತ ಪಕ್ಷಕ್ಕೆ ಆಡಳಿತ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next