ವಿಜಯಪುರ : ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದ್ದರೂ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಬಿಜೆಪಿ ರಾಜ್ಯದ ಬರ ಅಧ್ಯಯನಕ್ಕೆ ತಂಡಗಳನ್ನು ರಚಿಸಿದ್ದು, ಮೈಸೂರು ಭಾಗಕ್ಕೆ ನಾನು ನ.6 ಹಾಗೂ 7 ರಂದು ಪ್ರವಾಸ ಮಾಡಲಿದ್ದೇನೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಬುಧವಾರ ನರಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಯವ ಘಳಿಗೆಯಲ್ಲಿ ಅಧಿಕಾರಕ್ಕೆ ಬಂತೋ ಏನೋ, ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ರೈತರಿಗೆ ಬೆಳ ಹಾನಿ ಪರಿಹಾರ ನೀಡುತ್ತಿಲ್ಲ, ಪಂಪ್‍ಸೆಟ್‍ಗಳಿಗೆ ಸೂಕ್ತ ವಿದ್ಯುತ್ ನೀಡುತ್ತಿಲ್ಲ, ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲದ ದುಸ್ಥಿತಿ ಎದುರಾಗಿದೆ. ಇಷ್ಟಾದರೂ ಪರಿಸ್ಥಿತಿ ಎದುರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲೌಆಗಿರುವ ಕಾರಣ ಬಜೆಪಿ ರಾಜ್ಯದಲ್ಲಿನ ಬರ ಆಧ್ಯಯನಕ್ಕೆ ಮುಂದಾಗಿದೆ. ಅಧ್ಯಯನದ ವರದಿಯನ್ನು ವಿಧಾನಮಂಡಲದ ಬರುವ ಆಧಿವೇಶನದಲ್ಲಿ ತೆರೆದಿಡಲಿದ್ದೇವೆ ಎಂದರು.
ಭಾಷಣಕ್ಕೆ ಸೀಮಿತವಾಗಿರುವ ರಾಜ್ಯ ಸರ್ಕಾರ, ಘೋಷಿತ ಒಂದೂ ಯೋಜನೆ ಅನುಷ್ಠಾನಕ್ಕೆ ತರಲಾಗದೇ ಸಂಪೂರ್ಣ ದಿವಾಳಿಯಾಗಿದೆ. ಮಹಿಳೆಯರಿಗೆ ನೀಡಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ತನ್ನ ಆಡಳಿತದ ಈ ವೈಫಲ್ಯ ಮುಚ್ಚಿಕೊಳ್ಳಲು ಬಸವನಾಡು ನಾಮಕರಣ, ಹುಲಿ ಉಗುರು, ಚಿರತೆ ಅಂತೆಲ್ಲ ಜನರನ್ನು ದಾರಿ ತಪ್ಪಿಸುತ್ತಿದೆ. ಹೀಗಾಗಿ ತಾನೇ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲಾಗದ ಈ ಸರ್ಕಾರ ತಾನೇ ತಾನಾಗಿ ಪತನವಾಗಲಿದೆ ಎಂದು ಹರಿಹಾಯ್ದರು.
Advertisement