Advertisement

Congress Government: ರಾಜ್ಯ ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ 

12:29 AM Jul 04, 2024 | Team Udayavani |

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌, ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಜತೆಗೆ ಮೈಸೂರಿನಲ್ಲಿ ಮುಡಾದಿಂದ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸಬೇಕೆಂದು ಇದೇ ಸಂದರ್ಭದಲ್ಲಿ ಪ್ರತಿಭಟನ ನಿರತ ಬಿಜೆಪಿಗರು ಒಕ್ಕೊರಲಿನಿಂದ ಆಗ್ರಹಿಸಿ ಸಿಎಂ ರಾಜೀನಾಮೆಗೆ ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯೋಜಿಸಿದ್ದ ಬಿಜೆಪಿಯು 2 ತಂಡಗಳಾಗಿ ಸಿಎಂ ನಿವಾಸದ ರಸ್ತೆಯಲ್ಲಿ ಬಂದು ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಆರಂಭದಲ್ಲಿ ಕುಮಾರಕೃಪಾ ಅತಿಥಿಗೃಹದಲ್ಲಿದ್ದ ಶಾಸಕರಾದ ವಿ. ಸುನೀಲ್‌ ಕುಮಾರ್‌, ಸಿ.ಕೆ. ರಾಮಮೂರ್ತಿ, ಸುರೇಶ್‌ಗೌಡ ಸೇರಿದಂತೆ ಇನ್ನಿತರರು ಹೊರಬಂದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು. ಅತಿಥಿಗೃಹದಿಂದ ಹೊರಬರುತ್ತಿದ್ದಂತೆ ತಡೆದ ಪೊಲೀಸರ ಜತೆಗೆ ಕಾರ್ಯಕರ್ತರು ವಾಗ್ವಾದಕ್ಕಿಳಿದ ಪ್ರಸಂಗ ನಡೆಯಿತು.

ಬ್ಯಾರಿಕೇಡ್‌ ತಳ್ಳಿ ನುಗ್ಗಿದ ನಾಯಕರು
ಹೆಚ್ಚಿನ ಭದ್ರತೆಗಾಗಿ ಸಿಎಂ ನಿವಾಸದ ಬಳಿ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಹೆಚ್ಚುವರಿ ಪೊಲೀಸ್‌ ಸಿಬಂದಿಯನ್ನೂ ನಿಯೋಜಿಸಲಾಗಿತ್ತು. ಸರಕಾರದ ವಿರುದ್ಧ ಯಾವುದೇ ಘೋಷಣೆಗಳನ್ನೂ ಕೂಗದೆ ಸಿಎಂ ನಿವಾಸದತ್ತ ಹೆಜ್ಜೆ ಹಾಕಿದ ನಾಯಕರನ್ನು ಪೊಲೀಸರು ತಡೆಯಲು ಯತ್ನಿಸುತ್ತಿದ್ದಂತೆ ಕೆರಳಿದ ನಾಯಕರು, ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಹೊರಟರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ಕೂಡ ನಡೆಯಿತು.

ಪೊಲೀಸರು-ಕಾರ್ಯಕರ್ತರ ನಡುವೆ ಚಕಮಕಿ
ದಾರಿಯಲ್ಲಿ ನಡೆದುಕೊಂಡು ಹೊರಟಿದ್ದ ಶಾಸಕರ ಮೈಮುಟ್ಟಿದ್ದರಿಂದ ಗರಂ ಆದ ಶಾಸಕರು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ನಾವೇನು ಪ್ರತಿಭಟಿಸುತ್ತಿದ್ದೇವಾ? ನಮ್ಮನ್ನೇಕೆ ಮುಟ್ಟುತ್ತೀರಿ? ಅದೇನು ನಿಮ್ಮ ಮನೆ ಆಸ್ತಿಯೇ? ಸಿಎಂ ಮನೆ ಅಲ್ಲವೇ? ಸಿಎಂ ಮನೆಗೆ ಪ್ರವೇಶವಿಲ್ಲವೇ? ತಡೆಯೊಡ್ಡುತ್ತಿರುವುದೇಕೆ ಎಂದು ಶಾಸಕ ಸುನೀಲ್‌ ಕುಮಾರ್‌ ಪೊಲೀಸರಿಗೆ ಬಿಸಿ ಮುಟ್ಟಿಸಿದರು. ಅಷ್ಟರಲ್ಲಿ ಪ್ರತಿಭಟನಾಕಾರರನ್ನು ಒಬ್ಬೊಬ್ಬರಾಗಿಯೇ ಪೊಲೀಸರು ವಶಕ್ಕೆ ಪಡೆದು ಬಸ್‌ ಹತ್ತಿಸಿದರು.

Advertisement

ಬಂಧಿಸುವಷ್ಟರಲ್ಲಿ ರಸ್ತೆಗಿಳಿದ ಮತ್ತೊಂದು ತಂಡ
ಅಷ್ಟರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ಶಾಸಕರ ದೊಡ್ಡ ದಂಡೇ ಆಗಮಿಸಿತು. ಶಿವಾನಂದ ವೃತ್ತದ ಕಡೆಯಿಂದ ಆಗಮಿಸಿದ ಶಾಸಕರಾದ ಆರಗ ಜ್ಞಾನೇಂದ್ರ, ಸಿ.ಟಿ.ರವಿ, ಡಾ. ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ಗುರುರಾಜ್‌ ಗಂಟಿಹೊಳೆ, ಯಶ್‌ಪಾಲ್‌ ಸುವರ್ಣ, ಪ್ರತಾಪಸಿಂಹ ನಾಯಕ್‌, ಭಾರತಿ ಶೆಟ್ಟಿ ಅವರು ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next