ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್‌ನೊಂದಿಗೆ ಸೀಟು ಹಂಚಿಕೆ ಕುರಿತು ಯಾವುದೇ ಗೊಂದಲವಿಲ್ಲ. ಮಾ.16 ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎಲ್ಲವೂ ಸುಗಮವಾಗಿ ಚರ್ಚೆಯಾಗಿದೆ. ಮಾ.16 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು,ಅಂದಿನ ಸಭೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಮಾಡಲಾ ಗುವುದು ಎಂದರು.
ಸುಮಲತಾಗೆ ಬೆಂಬಲವಿಲ್ಲ
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದರಿಂದ ಅಲ್ಲಿ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್‌ನಿಂದ ಬೆಂಬಲ ಸೂಚಿಸಲು ಆಗುವುದಿಲ್ಲ. ಅಂಬರೀಶ್ ಅವರ ಬಗ್ಗೆ ನಮಗೆ ಗೌರವ ಇದೆ. ಅಲ್ಲದೇ ಸುಮಲತಾ ಅವರ ಬಗ್ಗೆ ನಮಗೆ ಸಿಂಪಥಿ ಇದೆ. ಆದರೆ, ಈ ಸಮಯದಲ್ಲಿ ಅವರ ಜತೆ ನಿಲ್ಲುವುದು ಸಾಧ್ಯವಿಲ್ಲ ಎಂದರು.
ಮಂಡ್ಯದಲ್ಲಿ ಸ್ಥಳೀಯ ವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಿನ್ನಾ ಭಿಪ್ರಾಯಗಳಿವೆ. ಅದನ್ನು ಸರಿಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕಳೆದ ಉಪ ಚುನಾವಣೆ ಸಂದರ್ಭದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮಂಡ್ಯ ಉಸ್ತುವಾರಿಯಾಗಿದ್ದರಿಂದ ಮಂಡ್ಯ ಜಿಲ್ಲಾ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ನಾವೆಲ್ಲರೂ ಸೇರಿಯೇ ಮಂಡ್ಯದ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದರು.
ಗುರುವಾರ ಬೆಳಗಾವಿ ಮುಖಂಡರ ಸಭೆ
ಬೆಳಗಾವಿ ಜಿಲ್ಲಾ ಮುಖಂಡರಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎನ್ನುವ ಗೊಂದಲ ಉಂಟಾಗಿರುವುದರಿಂದ ಗುರುವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಮುಖಂಡರ ಸಭೆ ಕರೆಯಲಾಗಿದ್ದು, ಆ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಸೂಚಿಸಲಾಗುವುದು ಎಂದು ಹೇಳಿದರು.
18ಕ್ಕೆ ಕಲಬುರಗಿಗೆ ರಾಹುಲ್ ಗಾಂಧಿ
ಬೆಂಗಳೂರು: ಮಾ.18ಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರಗಿಗೆಆಗಮಿಸಲಿದ್ದು, ಹೈದರಾಬಾದ್-ಕರ್ನಾಟಕದ ಆರು ಜಿಲ್ಲೆಗಳಿಂದ ಸುಮಾರು 2 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. ಹೈದರಾಬಾದ್ -ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಆಗಮಿಸುವುದರಿಂದ ಆ ಭಾಗದಲ್ಲಿ ಕಾಂಗ್ರೆಸ್ ಗೆಲುವಿಗೆ ಹೆಚ್ಚು ಅನುಕೂಲವಾಗಿದೆ. ತಿಂಗಳಾಂತ್ಯದಲ್ಲಿ ಬೆಂಗಳೂರಿನಲ್ಲೂ ರಾಹುಲ್ ಗಾಂಧಿ ಸಮಾವೇಶ ನಡೆಸಲು ಚಿಂತಿಸಲಾಗಿದೆ. ಈ ಬಗ್ಗೆ ಅಧಿಕೃತ ದಿನಾಂಕ ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.