Advertisement

ಕೈ ಪಟ್ಟಿ ಕಗ್ಗಂಟು; ಇಂದು ಮತ್ತೆ ಚುನಾವಣಾ ಸಮಿತಿ ಸಭೆ

06:00 AM Apr 14, 2018 | Team Udayavani |

ಬೆಂಗಳೂರು:ಬಹು ನಿರೀಕ್ಷಿತ ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆಗೆ ನಾನಾ ಅಡೆ-ತಡೆಗಳು ಎದುರಾಗಿದ್ದು, ಟಿಕೆಟ್‌ ಹಂಚಿಕೆ ವಿಷಯದಲ್ಲಿ ಪಕ್ಷದ ಹಿರಿಯ ನಾಯಕರ ನಡುವೆ ಒಮ್ಮತ ಮೂಡದ ಕಾರಣ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.

Advertisement

ದೆಹಲಿಯಲ್ಲಿ ಶುಕ್ರವಾರ ಇಡೀ ದಿನ ಕೇಂದ್ರ ಚುನಾವಣಾ ಸಮಿತಿ ಮೂರ್‍ನಾಲ್ಕು ಬಾರಿ ಸಭೆ ಸೇರಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಎರಡು ಬಾರಿ ಚರ್ಚೆ ನಡೆಯಿತಾದರೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ.

ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 130 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ದಪಡಿಸಲಾಗಿತ್ತಾದರೂ ಹಿರಿಯ ನಾಯಕರು ಕೆಲವು ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದರು. ಜತೆಗೆ  ವಲಸಿಗರು ಹಾಗೂ ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಅಪಸ್ವರ ಎತ್ತಿರುವುದರಿಂದ ಪಟ್ಟಿ ಅಂತಿಮಗೊಳಿಸಲು ಹರಸಾಹಸ ಪಡುವಂತಾಗಿದೆ ಎಂದು ಹೇಳಲಾಗಿದೆ.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಶನಿವಾರ ಮತ್ತೂಂದು ಬಾರಿ ಸಭೆ ಸೇರಿ ಚರ್ಚಿಸಿ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.

ಏನಾಯ್ತು ?: ಬೆಳಿಗ್ಗೆ 11 ಗಂಟೆಗೆ ಸಭೆ ಸೇರಿದ್ದ ಕೇಂದ್ರ ಚುನಾವಣಾ ಸಮಿತಿ ಮುಖಂಡರು ಗೊಂದಲ ಉಂಟಾಗಿದ್ದರಿಂದ ಸಭೆಯನ್ನು ಸಂಜೆ ಐದು ಗಂಟೆಗೆ ಸೇರಲು ನಿರ್ಧರಿಸಿದರು. ಸಂಜೆ ಐದು ಗಂಟೆಗೆ ಮತ್ತೂಂದು ಬಾರಿ ಸಭೆ ಸೇರಿ ಚರ್ಚೆ ನಡೆಸಿ 130 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ತೀರ್ಮಾನ ಮಾಡಲಾಯಿತು. ಆದರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಿಯನ್ನು ಮತ್ತೂಮ್ಮೆ ಪರಿಷ್ಕರಿಸಬೇಕೆಂದು ರಾಹುಲ್‌ ಗಾಂಧಿ ಬಳಿ ಕೇಳಿಕೊಂಡರು. ಹೀಗಾಗಿ, ಶುಕ್ರವಾರ ಸಂಜೆ ಬಿಡುಗಡೆಯಾಗಬೇಕಿದ್ದ ಮೊದಲ ಪಟ್ಟಿ ಬಿಡುಗಡೆಗೆ ತಡೆ ಉಂಟಾಗಿಯಿತು ಎಂದು ತಿಳಿದು ಬಂದಿದೆ.

Advertisement

ಎರಡು ಕಡೆ ಸ್ಪರ್ಧೆಗೆ ವಿರೋಧ
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡಲು ಮುಂದಾಗಿರುವುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡುವುದಾದರೆ, ತಮಗೂ ಎರಡು ಕಡೆ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೈ ಕಮಾಂಡ್‌ ಮುಂದೆ ಹೊಸ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ . ಮುಖ್ಯಮಂತ್ರಿ ಹಳೆ ಮೈಸೂರು ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎಂದರೆ, ಸೋಲುವ ಭೀತಿ ಇದೆ ಎಂಬ ಸಂದೇಶ ರವಾನೆಯಾಗುತ್ತದೆ. ಇದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು ಎನ್ನಲಾಗಿದೆ.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕೆ ವ್ಯತಿರಿಕ್ತ ವಾದ ಮಂಡಿಸಿ , ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧೆ ಮಾಡಿದರೆ ಆ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗುತ್ತದೆ. ಬಾದಾಮಿ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಲಿದೆ ಎಂದು ಎರಡು ಕಡೆ ಸ್ಪರ್ಧೆ ಮಾಡುವುದನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೈ ಕಮಾಂಡ್‌ ಕೂಡ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ. ಮಂಜೇಗೌಡ ಹೊಳೆನರಸೀಪುರ ಕ್ಷೇತ್ರದಲ್ಲಿ ತಾವೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಗ್ಗೆ ವೀರಪ್ಪಮೊಯಿಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಸದಸ್ಯತ್ವವನ್ನೂ ಪಡೆಯದ ಕಳಂಕಿತ ಅಧಿಕಾರಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಜನಾರ್ದನ ರೆಡ್ಡಿಯನ್ನೂ ಸೇರಿಸಿಕೊಳ್ಳಿ!:
ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿ, ಆನಂದ್‌ಸಿಂಗ್‌, ನಾಗೇಂದ್ರ ಅವರನ್ನು ಸೇರಿಸಿಕೊಂಡು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದೀರಿ,ಜನಾರ್ದನ ರೆಡ್ಡಿ ಅವರೂ ಬಂದರೆ ಸೇರಿಸಿಕೊಂಡು ಬಿಡಿ ಎಂದು ಖಾರವಾಗಿಯೇ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಹೊಳೇನರಸೀಪುರದಲ್ಲಿ ಮಂಜೇಗೌಡ  ಬದಲಿಗೆ ಮಾಜಿ ಸಂಸದ ಪುಟ್ಟಸ್ವಾಮಿ ಗೌಡ ಅವರ ಸೊಸೆ ಅನುಪಮಾಗೆ ಟಿಕೆಟ್‌ ನೀಡುವಂತೆ  ಒತ್ತಾಯಿಸಿದರು ಎಂದು ಹೇಳಲಾಗಿದೆ.

ದೇವನಹಳ್ಳಿಗೆ ಪಟ್ಟು
ತಮ್ಮ ಬೆಂಬಲಿಗರಿಗೆ ದೇವನಹಳ್ಳಿ ಕ್ಷೇತ್ರದ ಟಿಕೆಟ್‌ ಕೊಡಿಸಲು ಮಲ್ಲಿಕಾರ್ಜುನ ಖರ್ಗೆ ಹಾಗೂ ಎಂ.ವೀರಪ್ಪ ಮೊಯಿಲಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ವೀರಪ್ಪ ಮೊಯಿಲಿ ಬೊವಿ ಸಮುದಾಯದ ವೆಂಕಟಸ್ವಾಮಿ ಪರ ಲಾಬಿ ನಡೆಸಿದ್ದರೆ ಮಲ್ಲಿಕಾರ್ಜುನ ಖರ್ಗೆ ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಬೀದರ ದಕ್ಷಿಣ ಕ್ಷೇತ್ರದಿಂದ  ಅಶೋಕ್‌ ಖೇಣಿಗೆ ಟಿಕೆಟ್‌ ನೀಡುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಪುಲಕೇಶಿ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್‌ಗೆ ಟಿಕೆಟ್‌ ದೊರೆತರೆ ಮಾತ್ರ ಖೇಣಿ ಸ್ಪರ್ಧೆಗೆ ಅವಕಾಶ ಸಿಗಬಹುದು ಎಂದು ಹೇಳಲಾಗಿದೆ;ಮತ್ತೂಂದೆಡೆ ಆಕಾಂಕ್ಷಿಗಳು ದೆಹಲಿಯಲ್ಲಿ ಜಮಾಯಿಸಿ ಎಐಸಿಸಿ ಉಸ್ತುವಾರಿ ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಒತ್ತಡ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next