ಹೊಸದಿಲ್ಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷವನ್ನು ನಡೆಸಲು ಮೆಂಟಲೀ ಅನ್‌ಫಿಟ್ ಎಂದು ದೂಷಿಸಿದ ಒಂದು ದಿನದ ತರುವಾಯ ದಿಲ್ಲಿ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಬರ್ಖಾ ಸಿಂಗ್ ಶುಕ್ಲಾ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ.
ದಿಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪದಕ್ಕೆ ನಿನ್ನೆ ಗುರುವಾರ ರಾಜೀನಾಮೆ ನೀಡಿದ್ದ ಬರ್ಖಾ ಅವರು ಪಕ್ಷವನ್ನು ತೊರೆದಿರಲಿಲ್ಲ. ಆದರೆ ಇಂದು ಬೆಳಗ್ಗೆ ಕಾಂಗ್ರೆಸ್ ಬರ್ಖಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಆರು ವರ್ಷಗಳ ಅವಧಿಗೆ ಪಕ್ಷದಿಂದಲೇ ಉಚ್ಚಾಟಿಸಿತು.
ಮಾಜಿ ಸಚಿವ ನರೇಂದ್ರ ನಾಥ್ ಅವರ ಅಧ್ಯಕ್ಷತೆಯ ರಾಜ್ಯ ಘಟಕದ ಶಿಸ್ತು ಸಮಿತಿಯು ಇಂದು ಬರ್ಖಾ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವನ್ನು ಕೈಗೊಂಡಿತು.
ಡಿಪಿಸಿಸಿ ಶಿಸ್ತು ಸಮಿತಿಯು ತನ್ನ ಸಭೆಯಲ್ಲಿ ಬರ್ಖಾ ಸಿಂಗ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಂಡಿತು ಎಂದು ಪಕ್ಷದ ಪ್ರಕಟನೆ ತಿಳಿಸಿದೆ. ಎಂಸಿಡಿ ಚುನಾವಣೆಗೆ ಕೆಲವೇ ದಿನಗಳು ಇರುವಾಗ ನಡೆದಿರುವ ಈ ಉಚ್ಚಾಟನೆ ಕಾಂಗ್ರೆಸ್‌ಗೆ ಮಾರಕವಾಗಲಿದೆ ಎಂದು ತಿಳಿಯಲಾಗಿದೆ.
ಈ ಉಚ್ಚಾಟನಾ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಬರ್ಖಾ ಸಿಂಗ್ ಅವರು ಟ್ವೀಟ್ ಮಾಡಿ ‘#RahulGandhiMuktCongress’ ಎನ್ನುವುದು ಹೊಸ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.
“ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ; ಪಕ್ಷದೊಳಗೆ ಇದ್ದುಕೊಂಡೇ ನನ್ನ ಹೋರಾಟವನ್ನು ಮುಂದುವರಿಸುವೆ; ನನ್ನ ಕಾನೂನುಬಾಹಿರ ಉಚ್ಚಾಟನೆಯನ್ನು ಪ್ರಶ್ನಿಸಿ ನಾನು ಕೋರ್ಟಿಗೆ ಹೋಗುವೆ’ ಎಂದು ಬರ್ಖಾ ಗುಡುಗಿದ್ದಾರೆ.