ಕುಂದಗೋಳ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯಿಂದ ಪಕ್ಷೇತರ ಅಭ್ಯರ್ಥಿ ಬೀರಪ್ಪ ಕುರುಬರ ಅವರನ್ನು ತನ್ನತ್ತ ಸೆಳೆದುಕೊಂಡು ಬಹುಮತ ಸಾಧಿಧಿಸುವುದರೊಂದಿಗೆ ಎಪಿಎಂಸಿ ಅಧಿಕಾರವನ್ನು ತನ್ನ ತೆಕ್ಕೆಗೆ ಪಡೆಯಿತು.
ಕಾಂಗ್ರೆಸ್ ಬೆಂಬಲಿತ 4 ಸದಸ್ಯರು ಹಾಗೂ ನಾಮನಿರ್ದೇಶನದ ಮೂವರು ಜನರು ಮತ್ತು ಪಕ್ಷೇತ್ರ ಅಭ್ಯರ್ಥಿ ಸೇರಿ ಒಟ್ಟು 8 ಜನರ ಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಪಡೆಯಿತು. ಬಿಜೆಪಿ ಬೆಂಬಲಿತ ಸದಸ್ಯರು 7 ಜನರಿದ್ದರೂ ಪ್ರಯೋಜನವಾಗಲಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಲ್ಲಪ್ಪ ದೊಡೋಲಿ 7 ಮತ ಪಡೆದು ಸೋಲು ಅನುಭವಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫಕ್ಕೀರಗೌಡ ಫಕ್ಕೀರಗೌಡ್ರ ಅವರು 8 ಮತಗಳಿಸಿ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹನಮಂತಪ್ಪ ಮೇಲಿನಮನಿ 6 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪ ಗೋವಿನಂದಪ್ಪನವರು 9 ಮತ ಪಡೆದು ಜಯಗಳಿಸಿದರು.
ಚುನಾವಣಾಧಿಕಾರಿಯಾಗಿ ಎಂ.ಎಸ್. ಬಣಸಿ ಕಾರ್ಯನಿರ್ವಹಿಸಿದರು. ಚುನಾವಣೆ ನಂತರ ಶಾಸಕ ಸಿ.ಎಸ್. ಶಿವಳ್ಳಿ ಅವರು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ನಂತರ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಎಪಿಎಂಸಿ ಅಭಿವೃದ್ಧಿಗೊಳಿಸಲು ಶ್ರಮಿಸಿದ್ದು, ಈಗಾಗಲೇ ಎಲ್ಲ ರಸ್ತ-ಗಟಾರ ಅಭಿವೃದ್ಧಿಗೊಳಿಸಲಾಗಿದೆ.
ಮೆಣಸಿನಕಾಯಿ ಸಂಸ್ಕರಣಾ ಘಟಕ ಶೀರ್ಘದಲ್ಲಿ ಆರಂಭಿಸಲಾಗುವುದು ಎಂದರು. ನೂತನ ಅಧ್ಯಕ್ಷ ಫಕೀರಗೌಡ ಫಕ್ಕೀರಗೌಡ್ರ ಮತ್ತು ಎಪಿಎಂಸಿ ನಿರ್ದೇಶಕ ಎ.ಬಿ.ಉಪ್ಪಿನ ಮಾತನಾಡಿದರು. ಜಿಪಂ ಸದಸ್ಯ ಉಮೇಶ ಹೆಬಸೂರ, ದಯಾನಂದ ಕುಂದೂರ,
ಅರವಿಂದಪ್ಪ ಕಟಗಿ, ವಿ.ಡಿ. ಹಿರೇಗೌಡ್ರ, ಸಿದ್ದಪ್ಪ ಹುಣಸಣ್ಣವರ, ಶಿವಪ್ಪ ಗುಡ್ಡಪ್ಪನವರ, ಶಶಿಧರ ಸೋಮರಡ್ಡಿ, ವಿಜಯಕುಮಾರ ಹಾಲಿ, ಗಂಗಧರ ದೇಶನೂರ, ಬಸಲಿಂಗಪ್ಪ ಕೋರಿ, ಸಕ್ರು ಲಮಾಣಿ, ಸಲಿಂ ಕಡ್ಲಿ, ವಿ.ವಿ. ರಂಗನಗೌಡ್ರ, ಹೈದರಾಲಿ ಹಸೂಬಯಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.