Advertisement

ಕಾಂಗ್ರೆಸ್‌ ಹೊಸ ನಡೆ : ಇಂದಿರಾ ಹೆಸರಲ್ಲಿ ಮತಯಾಚನೆ

06:20 AM Jul 22, 2017 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ಕಾಂಗ್ರೆಸ್‌ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಲ್ಲಿ ಮತ ಕೇಳಲು ನಿರ್ಧರಿಸಿದೆ. ಜತೆಗೆ ತಳಮಟ್ಟದಿಂದಲೇ ಪಕ್ಷ ಸಂಘಟನೆಗೆ ಮುಂದಾಗಿರುವ ಅದು, ‘ಕಾಂಗ್ರೆಸ್‌ ನಡಿಗೆ ಮರಳಿ ಜನರ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಮನೆ ಮನೆಗೆ ಸರಕಾರದ ಸಾಧನೆಗಳನ್ನು ಮುಟ್ಟಿಸಲು ತೀರ್ಮಾನಿಸಿದೆ.

Advertisement

ಈಗಾಗಲೇ ಬಿಜೆಪಿ ವಿಸ್ತಾರಕ ಯೋಜನೆ ಪರಿಚಯಿಸಿ, ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸಿ ಕೇಡರ್‌ ಬೆಳೆಸಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ತನ್ನ ಸಮೂಹದ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬಂದು ಕೇಡರ್‌ ಬೆಳೆಸುವತ್ತ ಗಮನಹರಿಸಿದೆ. ಕೆಪಿಸಿಸಿಗೆ 171 ಪದಾಧಿಕಾರಿಗಳ ನೇಮಕ ಮಾಡಿದ ಮೇಲೆ ಇದೇ ಮೊದಲ ಬಾರಿಗೆ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಸಿಎಂ ಸಿದ್ದರಾಮಯ್ಯ ನೇತೃತ್ವ ದಲ್ಲಿ ಸಭೆ ನಡೆದಿದ್ದು, ಪಕ್ಷದ ಮುಂದಿನ ನಡೆ ಕುರಿತು ಚರ್ಚಿಸಲಾಯಿತು.

ನವೆಂಬರ್‌ನಲ್ಲಿ ಇಂದಿರಾಗಾಂಧಿಯವರ ಜನ್ಮಶತಮಾನೋತ್ಸವ ನಡೆಯಲಿದ್ದು, ಈ ಅವಕಾಶವನ್ನು ಪಕ್ಷ ಬಲವರ್ಧನೆಗೆ ಬಳಸಿಕೊಳ್ಳಲು ತೀರ್ಮಾನಿಸ ಲಾಗಿದೆ. ನ. 1ರಿಂದ 18ರ ವರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದಿನದ ಪಾದ ಯಾತ್ರೆ ನಡೆಸಲಾಗುತ್ತದೆ. ‘ಇಂದಿರಮ್ಮ- 100’, ‘ಇಂದಿರಮ್ಮನ ಹಾದಿಯಲ್ಲಿ ಜನ ಸಾಮಾನ್ಯರ ಸೇವೆಯಲ್ಲಿ ಕಾಂಗ್ರೆಸ್‌’ ಎಂಬ ಘೋಷಣೆಯಡಿ ರಾಜ್ಯದ ಕಾಂಗ್ರೆಸ್‌ ಸರಕಾರದ ಸಾಧನೆ, ಇಂದಿರಾ ಗಾಂಧಿಯವರ ಕಾರ್ಯಕ್ರಮ, ಬದ್ಧತೆಯನ್ನು ಜನ ಸಾಮಾನ್ಯರಿಗೆ ತಲುಪಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ  ಸಭೆಯ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದರು. ತಳಮಟ್ಟದಲ್ಲಿ ಪಕ್ಷ ಬಲಗೊಳಿಸುವ ಜತೆಗೆ, ಎನ್‌ಡಿಎ ಸರಕಾರದ ವೈಫ‌ಲ್ಯಗಳ ಬಗ್ಗೆ ಅರಿವು ಮೂಡಿಸಲು ರಾಜ್ಯಾದ್ಯಂತ ಸಮಾವೇಶ ಮತ್ತು ನ. 19ರಂದು ರಾಜ್ಯ ಮಟ್ಟದ ಸಮಾವೇಶ ನಡೆಸುವುದಾಗಿ ಹೇಳಿದರು.

ಆಗಸ್ಟ್‌ನಲ್ಲಿ ಸಂಘಟನ ಹೊಣೆ: ಪ್ರತಿ ಜಿಲ್ಲೆಗೆ ಒಬ್ಬ ಉಪಾಧ್ಯಕ್ಷ ಮತ್ತು ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿದೆ. ಇವರು ಚುನಾವಣೆ ಮುಗಿಯುವವರೆಗೂ ತಮ್ಮ ತಮ್ಮ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ. ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ. ಜತೆಗೆ 70 ಸಾವಿರ ಬೂತ್‌ಗಳನ್ನು ಗುರುತಿಸಲಾಗಿದ್ದು, ಆಯಾ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂತ್‌ ಏಜೆಂಟರ ನೇಮಕ ಮತ್ತು ಸಮಿತಿಗಳನ್ನು ರಚಿಸುವ ಉಸ್ತುವಾರಿಯನ್ನು ಪ್ರಧಾನ ಕಾರ್ಯದರ್ಶಿಗೆ ನೀಡಲಾಗಿದೆ. ಆಗಸ್ಟ್‌ ಅಂತ್ಯಕ್ಕೆ ಈ ಎಲ್ಲ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.

ಸೆಪ್ಟಂಬರ್‌ನಲ್ಲಿ ಮನೆ ಮನೆಗೆ: ಬೂತ್‌ ಮಟ್ಟದ ಸಮಿತಿ ಸೆಪ್ಟಂಬರ್‌ನಲ್ಲಿ ಮನೆ ಮನೆಗೆ ತೆರಳಿ ರಾಜ್ಯದ ಕಾಂಗ್ರೆಸ್‌ ಸರಕಾರದ ಸಾಧನೆ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವೈಫ‌ಲ್ಯಗಳ ಬಗ್ಗೆ ಅರಿವು ಮೂಡಿಸಲಿದೆ. ಇದಕ್ಕೆ ‘ಕಾಂಗ್ರೆಸ್‌ ನಡಿಗೆ ಮರಳಿ ಜನರ ಬಳಿಗೆ’ ಎಂಬ ಘೋಷವಾಕ್ಯ ಇಡಲಾಗಿದೆ.

Advertisement

ನವೆಂಬರ್‌ನಲ್ಲಿ ಇಂದಿರಮ್ಮ -100: ನವೆಂಬರ್‌ನಲ್ಲಿ ಇಂದಿರಾ ಗಾಂಧಿಯವರ ಜನ್ಮಶತಮಾನೋತ್ಸವ ನಡೆಯಲಿದ್ದು, ಈ ಅವಕಾಶವನ್ನು ಪಕ್ಷ ಬಲವರ್ಧನೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ನ. 1ರಿಂದ 18ರ ವರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದಿನದ ಪಾದಯಾತ್ರೆ ನಡೆಸಲಾಗುತ್ತದೆ. ‘ಇಂದಿರಮ್ಮ-100’, ‘ಇಂದಿರಮ್ಮನ ಹಾದಿಯಲ್ಲಿ ಜನಸಾಮಾನ್ಯರ ಸೇವೆಯಲ್ಲಿ ಕಾಂಗ್ರೆಸ್‌’ ಎಂಬ ಘೋಷಣೆಯಡಿ ರಾಜ್ಯದ ಕಾಂಗ್ರೆಸ್‌ ಸರಕಾರದ ಸಾಧನೆ, ಇಂದಿರಾ ಗಾಂಧಿಯವರ ಕಾರ್ಯಕ್ರಮ, ಬದ್ಧತೆಯನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತದೆ.

ಡಿಸೆಂಬರ್‌ನಲ್ಲಿ ಎರಡನೇ ಬಾರಿ ಬೂತ್‌ ಮಟ್ಟಕ್ಕೆ ಹೋಗಿ ಸರಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪೂರ್ಣ ವಿವರವನ್ನು ಪದಾಧಿಕಾರಿಗಳಿಗೆ ನೀಡಲಾಗಿದ್ದು, ಅದರ ಆಧಾರದಲ್ಲಿ ಪಕ್ಷ ಸಂಘಟನೆಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ವಿಸ್ತಾರಕ ಯೋಜನೆಗೂ ಕಾಂಗ್ರೆಸ್‌ ಹಮ್ಮಿಕೊಂಡಿರುವ ಬೂತ್‌ ಮಟ್ಟದಿಂದ ಸಂಘಟನೆ ಕಾರ್ಯಕ್ಕೂ ಯಾವುದೇ ಸಂಬಂಧ ಇಲ್ಲ. ನಮ್ಮ ಕಾರ್ಯವಿಸ್ತಾರದ ರೀತಿಯೇ ಬೇರೆ. ನಮ್ಮ ಪಕ್ಷಕ್ಕೆ  132 ವರ್ಷದ ಇತಿಹಾಸವಿದ್ದರೆ ಬಿಜೆಪಿ ಕೇವಲ 37 ವರ್ಷದ ಪಕ್ಷ.
– ಡಾ| ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next