ಬೆಂಗಳೂರು: ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿಲ್ಲ. ಹಿಂಸಾಚಾರ ನಡೆಯಲು ಕೇಂದ್ರ ಬಿಜೆಪಿ ಸರ್ಕಾರವೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದೇಶದಲ್ಲಿ ಎನ್‌ಆರ್‌ಸಿ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್‌ಷಾ ಸ್ಪಷ್ಟವಾಗಿ ಹೇಳಿದ್ದರು. ಆದರೆ, ಜಾರಿ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಪೌರತ್ವ ಕಾಯ್ದೆ ಪಾಸ್ ಆದ ಮೇಲೆ ಎನ್‌ಆರ್‌ಸಿ ಜಾರಿಗೆ ತರುವುದಾಗಿ ಹೇಳಿದ್ದರು. ಅದರ ವಿರುದ್ಧ ಜನರೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಜೆಪಿ ಮಾಡುತ್ತಿರುವುದು ಸರಿಯಲ್ಲ. ಪ್ರತಿಭಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿಲ್ಲ. ಅನಾವಶ್ಯಕವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಬಿಜೆಪಿಯ ಉದ್ದೇಶವೇ “ಹಿಂದೂ ವರ್ಸಸ್ ಮುಸ್ಲಿಂ’ ವಾತಾವರಣ ನಿರ್ಮಾಣ ಮಾಡಬೇಕು ಎಂಬುದು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಮೇಲೆ ಅನಾವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ. ಪ್ರಧಾನಿ ಒಂದು ಹೇಳುತ್ತಾರೆ, ಗೃಹ ಸಚಿವರು ಇನ್ನೊಂದು ಹೇಳುತ್ತಾರೆ. ಹೀಗಿರುವಾಗ ಪ್ರಹ್ಲಾದ್ ಜೋಷಿ ಮಾತು ನಂಬುವುದು ಹೇಗೆ? ಎಂದು ಗುಂಡೂರಾವ್ ಪ್ರಶ್ನಿಸಿದರು.
ದೇಶದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಬಿಜೆಪಿ ಅದರ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿಯೇ ಬಿಜೆಪಿ ಮಹಾರಾಷ್ಟ್ರ ಕಳೆದುಕೊಂಡಿದೆ. ಈಗ ಜಾರ್ಖಂಡ್ ಸಹ ಕೈ ತಪ್ಪಿ ಹೋಗಿದೆ. ಇಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದರು.