ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಸಚಿವ ಸುಧಾಕರ್, ರಾಜಸ್ತಾನದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಟ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಮಾತನಾಡಿದರು.
ನಾಯಕನಲ್ಲಿ ವಿಶ್ವಾಸ ಇಲ್ಲದೇ ಇದ್ದಾಗಈ ರೀತಿ ಪ್ರತಿರೋಧಗಳು ಉಂಟಾಗುತ್ತವೆ. ಆಗ ನಾಯಕರು ಪರ್ಯಾಯದ ಬಗ್ಗೆ ಯೋಚನೆ ಮಾಡಬೇಕು. ಅದನ್ನು ಬಿಟ್ಟು ಕಾಯ್ದೆಗಳ ಮೂಲಕ ಶಾಸಕರನ್ನು ಹಿಡಿದುಟ್ಟುಕೊಂಡು ಅವರ ವಾಕ್ ಸ್ವಾತಂತ್ರ್ಯವನ್ನು ದಮನ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 17 ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಜನ ವಿರೋಧಿ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ ಬಳಿಕವೇ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸ್ಥಿರ ಆಡಳಿತ ನೀಡಲು ಸಾಧ್ಯವಾಗಿದೆ ಎಂದರು.
ನಾವು ನಂಬಿದ ಆಶಯಗಳಿಗೆ ಮೈತ್ರಿ ಸರ್ಕಾರದಲ್ಲಿ ಒತ್ತು ಸಿಗಲಿಲ್ಲ. ಆದ್ದರಿಂದ ನಾವು 17 ಮಂದಿ ರಾಜೀನಾಮೆ ನೀಡಿದೆವು. ಜನ ಕೂಡ ಮೈತ್ರಿ ಸರ್ಕಾರದ ವಿರುದ್ದ ಬೇಸತ್ತಿದ್ದರು. 15 ಜನರಲ್ಲಿ 12 ಮಂದಿಯನ್ನು ಜನರು ಗೆಲ್ಲಿಸಿದರು. ಅದರಲ್ಲಿ ಹತ್ತು ಮಂದಿ ಮಂತ್ರಿಗಳಾದೆವು ಎಂದರು.
ಕೋವಿಡ್ -19 ಪರಿಣಾಮದ ನಡುವೆ ಸಿಎಂ ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗೆ ಟೊಂಕ ಕಟ್ಟಿ ಜನ ಸ್ನೇಹ. ರೈತ ಸ್ನೇಹಿ ಆಡಳಿತ ನೀಡಿದ್ದಾರೆ, ಕಾರ್ಮಿಕರಿಗೆ, ರೈತರಿಗೆ ವಿಶೇಷ ಪ್ರೋತ್ಸಾಹ ನೀಡಿದ್ದಾರೆಂದ ಸಚಿವ ಸುಧಾಕರ್, ರಾಜ್ಯದಲ್ಲಿ ಇತರೇ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್ ಸಾವಿನ ಪ್ರಮಾಣ ಕಡಿಮೆ ಇದೆ ಎಂದರು