ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಕಚೇರಿ ಕೇಶವ ಕುಂಜದ ಪ್ರಮುಖರಿಗೆ ಖಾದಿಯಿಂದ ತಯಾರಿಸಿದ ರಾಷ್ಟ್ರ ಧ್ವಜವನ್ನು ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ವಿತರಿಸಲಾಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತ್ರಿವಣ ಧ್ವಜದ ಚಿತ್ರ ಹಾಕಿಕೊಳ್ಳುತ್ತಿದ್ದು, ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಾಲತಾಣದ ಪ್ರೊಫೈಲ್‌ಗಳಲ್ಲಿ ಭಗವಾ ಧ್ವಜವಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ತ್ರಿವರ್ಣ ಧ್ವಜ ನೀಡಿದರು. ಆ.15ರಂದು ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜ ಹಾರಿಸಬೇಕು. ಸಂಘದ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಧ್ವಜ ಚಿತ್ರ ಇಟ್ಟುಕೊಳ್ಳುವ ಮೂಲಕ ದೇಶಪ್ರೇಮ ಮೆರೆಯುವಂತೆ ಮನವಿ ಮಾಡಿದರು.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿ ಮಾತನಾಡಿ, ಆರ್ ಎಸ್‌ಎಸ್‌ನ ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ಭಗವಾ ಧ್ವಜವನ್ನೇ ಇಟ್ಟುಕೊಂಡಿದ್ದಾರೆ. ಸ್ವಾತಂತ್ರ್ಯೋತ್ಸವ 75ರ ಸಂಭ್ರಮಕ್ಕೆ ಇಡೀ ದೇಶದ ಜನರು ಭಾಗಿಯಾಗುತ್ತಿದ್ದಾರೆ. ತಮ್ಮ ಪ್ರೊಫೈಲ್ ಗಳಲ್ಲಿ ಹಾಗೂ ಪ್ರತಿಯೊಬ್ಬರು ತಮ್ಮ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಮುಂದಾಗಿದ್ದಾರೆ. ಆದರೆ ದೇಶಪ್ರೇಮ, ರಾಷ್ಟ್ರಭಕ್ತಿ ಹೇಳಿಕೊಡುತ್ತೇವೆ ಎನ್ನುವ ಆರ್ ಎಸ್‌ಎಸ್ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜ ಕಾಣುತ್ತಿಲ್ಲ. ಅಲ್ಲದೆ ಈ ಸಂಘದ ಹಿರಿಯರು ಹಿಂದೆ ರಾಷ್ಟ್ರಧ್ವಜ ವಿರೋಧಿಸಿದ್ದರು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಮುಂದೊಂದು ದಿನ ಕೇಸರಿ ಬಣ್ಣದ ಭಗವಾಧ್ವಜ ರಾಷ್ಟ್ರ ಧ್ವಜ ಆಗಲಿ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಅವರಿಗೆ ಖಾದಿಯಿಂದ ಮಾಡಿದ ರಾಷ್ಟ್ರಧ್ವಜದ ಮಹತ್ವ ತಿಳಿಸಿ ಹೇಳಿದ್ದೇವೆ ಎಂದರು.
ಆರ್‌ಎಸ್‌ಎಸ್ ಪ್ರಮುಖ ಅಮರನಾಥ ಮಾತನಾಡಿ, ಪ್ರಧಾನಿ ಮೋದಿ ಕರೆ ನೀಡಿದ್ದು, ಪ್ರತಿಯೊಬ್ಬರು ತಮ್ಮ ಮನೆ ಮೇಲೆ ಧ್ವಜ ಹಾರಿಸಬೇಕು. ಮಸೀದಿ, ಮದರಸಾಗಳ ಮೇಲೂ ರಾಷ್ಟ್ರಧ್ವಜ ಹಾರಿಸಬೇಕು. ನಮ್ಮ ಬಳಿಯೂ ರಾಷ್ಟ್ರಧ್ವಜ ಇದೆ. ರಾಷ್ಟ್ರೀಯ ಹಬ್ಬಗಳಲ್ಲಿ ತಪ್ಪದೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದೇವೆ. ಆದರೆ ರಜತ ಉಳ್ಳಾಗಡ್ಡಿಮಠ ಅವರು ಪ್ರೀತಿಯಿಂದ ಕೊಡುಗೆ ನೀಡುತ್ತಿರುವ ಕಾರಣ ರಾಷ್ಟ್ರಧ್ವಜ ಸೀÌಕರಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪ್ರಮುಖರಾದ ಹೂವಪ್ಪ ದಾಯಗೋಡಿ, ಬಸವರಾಜ ಮಲಕಾರಿ, ವೀರೇಶ ಜುಂಜನ್ನವರ, ಕಿರಣ ಹಿರೇಮಠ, ಶಿವಕುಮಾರ ಹಿರೇಮಠ, ಮೊಹ್ಮದ್ ಶರೀಫ್ ಗರಗದ, ಬಸವರಾಜ ಮ್ಯಾಗೇರಿ, ಮಲ್ಲಣ್ಣ ಮುತ್ತಗಿ, ಸಂತೋಷ ಮುದ್ದಿ, ಪುಷ್ಪಾ ಪಾಟೀಲ, ಬಾಳಮ್ಮ ಜಂಗಿನವರ, ಸುನೀಲ ಮರಾಠೆ, ಸಂತೋಷ ನಾಯಕ, ವಿಶಾಲ ಸಿಂಹಾಸನ, ನಾಗರಾಜ ಸೇರಿದಂತೆ ಇನ್ನಿತರರಿದ್ದರು.
ರಾಷಧ್ವಜ ಪಡೆಯಲು ವಾದ-ವಿವಾದ
ಆರಂಭದಲ್ಲಿ ರಾಷ್ಟ್ರ ಧ್ವಜ ಪಡೆಯಲು ಕೇಶವ ಕುಂಜದ ಪ್ರಮುಖರೊಬ್ಬರು ಹಿಂದೇಟು ಹಾಕಿದ ಘಟನೆ ನಡೆಯಿತು. ನಮ್ಮ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸುತ್ತೇವೆ. ಮೊದಲು ಮಸೀದಿ, ಮದರಸಾಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ. ನಮ್ಮಲ್ಲಿಯೂ ರಾಷ್ಟ್ರಧ್ವಜವಿದ್ದು, ರಾಷ್ಟ್ರೀಯ ಹಬ್ಬಗಳ ದಿನದಂದು ಹಾರಿಸುತ್ತೇವೆ. ಹಿಂದೂ ಧರ್ಮದ ಹಬ್ಬದ ಸಂದರ್ಭದಲ್ಲಿ ಭಗವಾ ಧ್ವಜ ಪ್ರಮುಖ ಎಂದು ವಾದಿಸಿ ಭಾರತ ಮಾತೆಯ ಘೋಷಣೆ ಕೂಗಿದರು. ಇದಕ್ಕೆ ಕಾಂಗ್ರೆಸ್ ನಾಯಕರು ಧ್ವನಿಗೂಡಿಸಿ ಜೈಕಾರ ಹಾಕಿದರು. ಧ್ವಜ ಹಾರಿಸಬೇಕೆನ್ನುವ ಪ್ರಧಾನಿ ಮೋದಿ ಕರೆಗಾದರೂ ಗೌರವ ಕೊಡಿ ಎಂದು ಕಾಂಗ್ರೆಸ್ ಮುಖಂಡರು ವಾದಿಸಿದರು. ತಮ್ಮಲ್ಲಿರುವ ರಾಷ್ಟ್ರಧ್ವಜವನ್ನು ಕಾಂಗ್ರೆಸ್ ನಾಯಕರ ಮುಂದೆ ಪ್ರದರ್ಶಿಸಿದರು. ಧ್ವಜದ ಮೇಲೆ ಕಲೆ ಬಿದ್ದಿದ್ದು, ಇದನ್ನು ಹಾರಿಸುವುದು ಅಪರಾಧವಾಗಲಿದೆ ಎಂದರು. ಇದನ್ನು ತೊಳೆದು ಹಾರಿಸುತ್ತೇವೆ ಎಂದು ಆರ್‌ಎಸ್‌ಎಸ್ ಮುಖಂಡರೊಬ್ಬರು ಹೇಳಿದರು. ತೊಳೆದು ಹಾರಿಸುವುದು ಕೂಡ ಅಪರಾಧವಾಗಲಿದೆ ಎಂದಾಗ ಕೆಲ ಸಮಯ ಮಾತಿನ ಜಟಾಪಟಿ ನಂತರ ಅಮರನಾಥ ಎಂಬುವರು ರಾಷ್ಟ್ರಧ್ವಜ ಸ್ವೀಕರಿಸಿ ಘೋಷಣೆ ಕೂಗಿದರು.