Advertisement

ಸಾಂವಿಧಾನಿಕ ಮಾನ್ಯತೆಗೆ ಕಾಂಗ್ರೆಸ್‌ ಅಡ್ಡಿ

06:05 AM May 11, 2018 | |

ಬೆಂಗಳೂರು: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್‌ ಸಂಸತ್‌ ಅಧಿವೇಶನ ನಡೆಯಲು ಬಿಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಗುರುವಾರ ಪಕ್ಷದ ಎಸ್‌ಸಿ, ಎಸ್ಟಿ, ಒಬಿಸಿ ಮೋರ್ಚಾ ಪದಾಧಿಕಾರಿಗಳೊಂದಿಗೆ ಅವರು ವಿಡಿಯೋ ಸಂವಾದ
ನಡೆಸಿದರು. 

ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಉಡುಪಿಯ ಶ್ಯಾಮಲಾ ಕುಂದರ್‌ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸುಮಾರು 20, 30 ವರ್ಷಗಳ ಕಾಲ ಹಿಂದುಳಿದ ವರ್ಗದ ಸಂಸದರು, ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೂ ಕಾಂಗ್ರೆಸ್‌, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಬಗ್ಗೆ ಚಿಂತನೆ ನಡೆಸಿರಲಿಲ್ಲ. ಹಾಗಾಗಿ, ಬಿಜೆಪಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಮುಂದಾಗಿದೆ ಎಂದು ಹೇಳಿದರು.

ವಿಡಿಯೋ ಸಂವಾದದಲ್ಲಿ ಮಾತನಾಡಿದ ಶ್ಯಾಮಲಾ ಕುಂದರ್‌, ಹಿಂದುಳಿದ ವರ್ಗಕ್ಕೆ ಸೇರಿದ ತಾವು
ಪ್ರಧಾನಿಯಾಗಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ
ಸಿಗದಂತೆ ಕಾಂಗ್ರೆಸ್‌ ದುಷ್ಕೃತ್ಯ ನಡೆಸಿದ್ದು ಈ ಬಗ್ಗೆ ಏನು ಹೇಳುವಿರಿ ಎಂದು ಪ್ರಶ್ನಿಸಿದರು.

ಮೊದಲಿಗೆ ನಗುತ್ತಲೇ ಮಾತು ಆರಂಭಿಸಿದ ಪ್ರಧಾನಿ, ನೀವು ಉಡುಪಿಯವರು, ನಾನು ದ್ವಾರಕೆಯವನು. ದ್ವಾರಕೆಗೂ, ಉಡುಪಿಗೂ ವಿಶೇಷ ಸಂಬಂಧವಿದೆ. ಸಮಾಜದಲ್ಲಿ ಸಮಾನವಾಗಿ ವಿಕಾಸವಾಗದಿದ್ದರೆ ಹಿಂದುಳಿದ ವರ್ಗಗಳು ಕಡೆಗಣಿಸಲ್ಪಡುತ್ತವೆ. ಹಿಂದುಳಿದ ವರ್ಗಗಳನ್ನು ಮುಂದಕ್ಕೆ ತರಬೇಕಿದೆ ಎಂದು ಹೇಳಿದರು.

Advertisement

ಬಿಜೆಪಿ ರಾಜ್ಯ ಪರಿಶಿಷ್ಟ ಜಾತಿ ಯುವ ಮೋರ್ಚಾ ಅಧ್ಯಕ್ಷರಾದ ಬೆಂಗಳೂರಿನ ಡಾ.ಸಂದೀಪ್‌, ದಲಿತರ ಸ್ಥಿತಿಗತಿ ಸುಧಾರಣೆಗೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಧಾನಿ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕೆ ಬಿಜೆಪಿ ಕೈಗೊಳ್ಳುವ ಕ್ರಮಗಳ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿ ವೇತನ, ಸಾಲ ಸೌಲಭ್ಯ, ಆರೋಗ್ಯ ಸೇವೆಗೆ ವಿಶೇಷ ಒತ್ತು ನೀಡಲಾಗಿದೆ. ಸೌಲಭ್ಯ ವಂಚಿತ ಎಲ್ಲರಿಗೂ ಅಗತ್ಯ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಳ್ಳಾರಿಯ ಎಚ್‌.ಹನುಮಂತಪ್ಪ ಪ್ರಶ್ನೆಗೆ ಉತ್ತರಿಸಿದ ಮೋದಿ,ಪರಿಶಿಷ್ಟ ಪಂಗಡ, ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. 
ಬುಡಕಟ್ಟು ಜನರ ಕಲ್ಯಾಣಕ್ಕೆ ಪೂರಕವಾಗಿ ಕೆಲ ಕಾನೂನುಗಳನ್ನು ಸಡಿಲಗೊಳಿಸಲಾಗಿದೆ. ಹಾಗೆಯೇ ಇತ್ತೀಚೆಗೆ ಕೆಲ ಅರ್ಹ ಸಮುದಾಯಗಳನ್ನು ಬುಡಕಟ್ಟು ಸಮುದಾಯಕ್ಕೆ ಸೇರ್ಪಡೆ ಮಾಡಲಾಗಿದೆ ಎಂದರು.

ಬಿಜೆಪಿ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುನಿಕೃಷ್ಣ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಗರಗಳು ಹೆಚ್ಚಾದಂತೆ
ಕೊಳೆಗೇರಿಗಳು ಹೆಚ್ಚಾಗುತ್ತಿವೆ. ಕೊಳೆಗೇರಿಗಳ ಒಂದು ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ಎಚ್ಚರ
ವಹಿಸಬೇಕು. ಕೊಳೆಗೇರಿ ಜನರಿಗೂ ಮೂಲ ಸೌಕರ್ಯ ಕಲ್ಪಿಸಿ ಆರ್ಥಿಕವಾಗಿ ಸಬಲರನ್ನಾಗಿಸಲು ಅಗತ್ಯ ಕ್ರಮಗಳನ್ನು  ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ದಲಿತರ ಕಲ್ಯಾಣಕ್ಕೆ ಬದ್ಧ
ಇದಕ್ಕೂ ಮೊದಲು ಪ್ರಸ್ತಾವಿಕವಾಗಿ ಮಾತನಾಡಿದ ಪ್ರಧಾನಿ ಮೋದಿ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರು ಬಿಜೆಪಿ ಜತೆಗಿದ್ದು, ಈ ಸಮುದಾಯಗಳಿಂದ ಆಯ್ಕೆಯಾದ ಸಂಸದರು ಪಕ್ಷದಲ್ಲಿ ಹೆಚ್ಚಿನ ಸಂಖ್ಯೆ
ಯಲ್ಲಿದ್ದಾರೆ. ಈ ಸಮುದಾಯದ ಜನರನ್ನು ಭೇಟಿ ಮಾಡಿ ಸರ್ಕಾರದ ಯೋಜನೆಗಳನ್ನು ತಿಳಿಸುವಲ್ಲಿ ಮೋರ್ಚಾಗಳ ಪಾತ್ರ ಮಹತ್ವದ್ದಾಗಿದೆ. ದಲಿತರು, ಬಡವರು, ಆದಿವಾಸಿಗಳು, ಶೋಷಿತರು, ಮಹಿಳೆಯರ ಕಲ್ಯಾಣಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು. 

ಕರ್ನಾಟಕದಲ್ಲಿ ಮಾದಾರ ಚೆನ್ನಯ್ಯ ಪ್ರಾಚೀನ ವಚನಕಾರರಾಗಿದ್ದು, ಸಾಮಾಜಿಕ ಏಕತೆಯ ಸಂದೇಶ ಸಾರಿದರು. ಹಾಗೆಯೇ ಉರಿಲಿಂಗಪೆದ್ದಿ ವಚನಕಾರರು ಸಹ ಸಾಮಾಜಿಕ ಕ್ರಾಂತಿಗೆ ಪ್ರೇರಣೆ ನೀಡಿದರು. ಕಾಂಗ್ರೆಸ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸಂಪೂರ್ಣ ಕಡೆಗಣಿಸಿದ್ದು, ಅವರಿಗೆ ಗೌರವ ನೀಡಿರುವ ಒಂದು ವಿಚಾರವೂ ಇಲ್ಲ. ಬಿಜೆಪಿಯು ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅಪಾರ ಗೌರವ ನೀಡಿದ್ದು, ಅವರ ಆಶಯದಂತೆ ಸಶಕ್ತ, ಸದೃಢ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next