Advertisement

Congress Dinner Meeting: ಹೈಕಮಾಂಡ್‌ ಮಧ್ಯ ಪ್ರವೇಶ ಪರಿಣಾಮ? ಔತಣಕೂಟ ಬಣ ಮೆತ್ತಗೆ?

01:05 AM Jan 15, 2025 | Team Udayavani |

ಬೆಂಗಳೂರು: ಪಕ್ಷದ ಹೈಕಮಾಂಡ್‌ ಬೀಸಿದ ಶಿಸ್ತಿನ ಚಾಟಿಗೆ ಮೆತ್ತಗಾದ ಔತಣಕೂಟ ಬಣಗಳು ತಮ್ಮ ವರಸೆ ಬದಲಿಸಿದ್ದು, ಸದ್ಯಕ್ಕೆ ಯಾವುದೇ ರೀತಿಯ ಸಭೆಗಳ ಸಹವಾಸ ಬೇಡ. ಈಗೇನಿದ್ದರೂ ಹೈಕಮಾಂಡ್‌ ಸೂಚನೆಯಂತೆ ಪಕ್ಷ ಸಂಘಟನೆ ಮತ್ತು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ಗಮನಹರಿಸುವ ನಿಲುವಿಗೆ ಬಂದಿದ್ದಾರೆ ಎನ್ನಲಾಗುತ್ತಿದ್ದು, ಗೃಹ ಸಚಿವ ಡಾ.ಪರಮೇಶ್ವರ್‌ ಮಂಗಳವಾರ ನೀಡಿದ ಹೇಳಿಕೆ ಇದಕ್ಕೆ ಪುಷ್ಟಿ ನೀಡಿದೆ.

Advertisement

ಔತಣಕೂಟ ಸಭೆ ರದ್ದಾಗಿಲ್ಲ, ಮುಂದೂಡಿಕೆ ಆಗಿದೆಯಷ್ಟೇ, ಮತ್ತೆ ಸಭೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದ ಪರಮೇಶ್ವರ್‌ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿ, ಔತಣಕೂಟ ಸಭೆ ನಡೆಸುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಔತಣಕೂಟ ರಾಜಕೀಯಕ್ಕೆ ಸದ್ಯಕ್ಕೆ ವಿರಾಮ ಬಿದ್ದಂತೆ ಆಗಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪರಮೇಶ್ವರ್‌, ಮುಂದೂಡಲ್ಪಟ್ಟ ಔತಣಕೂಟ ಸಭೆಯನ್ನು ಮತ್ತೆ ನಡೆಸುವ ಬಗ್ಗೆ ನಮ್ಮ ಹೈಕಮಾಂಡ್‌ ಪ್ರತಿನಿಧಿಯಾಗಿರುವ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜತೆ ಇನ್ನೂ ಚರ್ಚೆ ಆಗಿಲ್ಲ. ನಾಯಕರಿಗೆ ವಿವರಣೆ ನೀಡಲಿದ್ದೇವೆ. ಅವರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಸುರ್ಜೇವಾಲ ಜತೆ ನಡೆಯದ ಚರ್ಚೆ
ಈ ಮೊದಲು ಪಕ್ಷದ ಹೈಕಮಾಂಡ್‌ ಅನುಮತಿ ಪಡೆದು ಔತಣಕೂಟ ಸಭೆ ನಡೆಸುವುದಾಗಿ ಪರಿಶಿಷ್ಟ ಸಮುದಾಯದ ಸಚಿವರು ಹೇಳುತ್ತಿದ್ದರು. ಆದರೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಸೋಮವಾರ ಬೆಂಗಳೂರಿಗೆ ಆಗಮಿಸಿ ಸರಣಿ ಸಭೆಗಳನ್ನು ನಡೆಸಿ, ಪಕ್ಷದ ಶಾಸಕಾಂಗ ಸಭೆಯಲ್ಲೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಭೆ ನಡೆಸುವ ಸಂಬಂಧ ಅನುಮತಿ ಕೇಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಅಂತಹ ಯಾವುದೇ ಚರ್ಚೆಗೆ ಈ ನಾಯಕರು ಮುಂದಾಗಲಿಲ್ಲ.

ಇದರ ನಡುವೆ ಅಶಿಸ್ತು ಸಹಿಸುವುದಿಲ್ಲ ಎಂದು ರಣದೀಪ್‌ಸಿಂಗ್‌ ಸುರ್ಜೇವಾಲ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದರು. ಇದಕ್ಕೆ ಪೂರಕವಾಗಿ ಸ್ವತಃ ಸಿಎಂ ಸಿದ್ದರಾಮಯ್ಯ, ಪಕ್ಷದ ಶಾಸಕಾಂಗ ಸಭೆಯಲ್ಲಿ, “ನಾನು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ಎಲ್ಲರೂ ಹೈಕಮಾಂಡ್‌ ಆದೇಶಕ್ಕೆ ಬದ್ಧ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದರೊಂದಿಗೆ ಸಿಎಲ್‌ಪಿಯಲ್ಲಿ ದಲಿತ ಮುಖಂಡರ ಔತಣಕೂಟ ಸಭೆ ಮುಂದೂಡಿಕೆಯನ್ನು ಪ್ರತಿಧ್ವನಿಸಬಹುದು ಎಂಬ ನಿರೀಕ್ಷೆಗಳು ಹುಸಿಯಾದವು.

Advertisement

ಇನ್ನೂ ಒಂದು ಹೆಜ್ಜೆ ಮುಂದೆಹೋದ ಸುರ್ಜೇವಾಲ, “ಡಾ| ಪರಮೇಶ್ವರ್‌ ಒಬ್ಬ ಉತ್ತಮ ಸಂಘಟಕರಾಗಿದ್ದು, ಅಧ್ಯಕ್ಷರಾಗಿಯೂ ಪಕ್ಷವನ್ನು ಮುನ್ನಡೆಸಿದ್ದಾರೆ. ಪಕ್ಷದ ಶಿಸ್ತಿನ ಅರಿವು ಅವರಿಗಿದ್ದು, ನಮಗೆ ಅವರ ಬಗ್ಗೆ ಸದಭಿಪ್ರಾಯ ಇದೆ. ಇನ್ನುಳಿದಂತೆ ಪಕ್ಷದ ಒಳಗೆ ನಮ್ಮ ನಾಯಕರಿಗೆ ನನ್ನ ಸಂದೇಶ ತಲುಪಿಸಿದ್ದೇನೆ’ ಎಂದು ಹೇಳುವ ಮೂಲಕ ಔತಣಕೂಟ ಸಭೆ ಕರೆದಿದ್ದ ಬಣಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಔತಣಕೂಟ ಸಭೆಗೆ ಬಹುತೇಕ ತೆರೆಬಿದ್ದಂತಾಗಿದೆ. ಒಂದು ವೇಳೆ ಈ ನಿಟ್ಟಿನಲ್ಲಿ ಮುಂದಾದರೂ, “ಅನಗತ್ಯ ಗೊಂದಲ ಬೇಡ’ ಎಂದು ಹೈಕಮಾಂಡ್‌ ಅನುಮತಿ ನೀಡದಿರಬಹುದು.

Advertisement

Udayavani is now on Telegram. Click here to join our channel and stay updated with the latest news.